ಶಿವಮೊಗ್ಗ: ಪತಿ ಹಾಗೂ ಕುಟುಂಬದವರ ಕಿರುಕುಳಕ್ಕೆ ಬೇಸತ್ತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯ ಶವವನ್ನು ಆಸ್ಪತ್ರೆಯಲ್ಲಿಟ್ಟು ಕುಟುಂಬದವರು ಪರಾರುಯಾಗಿರುವ ಘಟನೆ ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನಲ್ಲಿ ನಡೆದಿದೆ.
ಪೂಜಾ ಮೃತ ಮಹಿಳೆ. ಮೂರು ವರ್ಷಗಳ ಹಿಂದೆ ಮಾವಿನಕೆರೆ ಶೆಟ್ಟಿಕೊಪ್ಪದ ಶರತ್ ಜೊತೆ ಪೂಜಾ ವಿವಾಹವಾಗಿತ್ತು. ದಂಪತಿಗೆ ಎರಡು ವರ್ಷದ ಮಗನಿದ್ದಾನೆ. ಆದರೂ ಪತಿ ಹಾಗೂ ಅತ್ತೆ-ಮಾವ, ನಾದಿನಿ ಪೂಜಾಳಿಗೆ ಕಿರುಕುಳ ನೀಡುತ್ತಿದ್ದರಂತೆ. ಇದರಿಂದ ನೊಂದ ಪೂಜಾ ತವರು ಮನೆಗೆ ಬಂದು ಕಣ್ಣೀರಿಟ್ಟಿದ್ದಳು. ಆಕೆಯನ್ನು ತವರಿನವರು ಸಮಾಧಾನ ಮಾಡಿ ಕಳುಹಿಸಿದ್ದರು.
ಮನೆಗೆ ಹಿಂತಿರುಗಿದ ಬಳಿಕ ಮತ್ತದೇ ರಾಗ ಎಂಬತ್ತೆ ಕಿರುಕುಳ, ಹಿಂಸೆ ಮುಂದುವರೆದಿದೆ. ಇದರಿಂದ ಬೇಸತ್ತ ಪೂಜಾ ಕ್ರಿಮಿನಾಶಕ ಸೇವಿಸಿದ್ದಳು. ಆಕೆಯನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಪೂಜಾ ಸಾವನ್ನಪ್ಪಿದ್ದಾಳೆ. ಪೂಜಾ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಯಲ್ಲಿಯೇ ಪೂಜಾ ಶವ ಬಿಟ್ಟು ಪತಿ ಹಾಗೂ ಕುಟುಂಬದವರು ಎಸ್ಕೇಪ್ ಆಗಿದ್ದಾರೆ.
