ವಿದ್ಯಾರ್ಥಿಗಳೇ ಗಮನಿಸಿ: ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆ ಉತ್ತೀರ್ಣ ಅಂಕಗಳಲ್ಲಿ ಬದಲಾವಣೆ

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು ನಡೆಸಲಾಗುತ್ತಿದೆ.

ಸಿ.ಬಿ.ಎಸ್.ಇ ಮತ್ತು ನೆರೆ ರಾಜ್ಯಗಳಲ್ಲಿ ಉತ್ತೀರ್ಣತೆ ಅಂಕಗಳಿಗೆ ಸಂಬಂಧಪಟ್ಟಂತೆ ಎಲ್ಲಾ ವಿಷಯಗಳಲ್ಲೂ ಹಾಗೂ ಪ್ರತಿ ವಿಷಯದಲ್ಲಿ ಕನಿಷ್ಠ ಶೇಕಡಾ 33 ರಷ್ಟು ಅಂಕಗಳನ್ನು ಪಡೆಯಬೇಕೆಂಬ ಮಾನದಂಡಗಳನ್ನು ಅಳವಡಿಸಿಕೊಳ್ಳಲಾಗಿರುತ್ತದೆ. ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2ರ 4ನೇ ವರದಿಯಲ್ಲಿಯೂ ಸಹ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಉತ್ತೀರ್ಣತಾ ಅಂಕಗಳನ್ನು ಕಡಿಮೆ ಮಾಡಲು ಶಿಫಾರಸ್ಸು ಮಾಡಿರುತ್ತಾರೆ.

ಪ್ರಸ್ತುತ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಕನಿಷ್ಠ ಶೇಕಡಾ 35 ಅಂಕಗಳನ್ನು ಪಡೆಯಬೇಕೆಂಬ ನಿಯಮವಿರುತ್ತದೆ. ವಿದ್ಯಾರ್ಥಿಗಳ ಉತ್ತೀರ್ಣತಾ ಪ್ರಮಾಣವನ್ನು ಹೆಚ್ಚಿಸುವ ದೃಷ್ಟಿಯಿಂದ ಮತ್ತು ಸಿಬಿಎಸ್‌ಇ ಹಾಗೂ ನೆರೆರಾಜ್ಯಗಳ ಉತ್ತೀರ್ಣತಾ ಮಾನದಂಡವನ್ನು ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೂ ಸಹ ಅನ್ವಯವಾಗುವಂತೆ ಏಕರೂಪ ಪದ್ದತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಮಂಡಲಿ ನಿಯಮಗಳಲ್ಲಿ ತಿದ್ದುಪಡಿ ತರಲು ಕರಡು ನಿಯಮದ ಅಧಿಸೂಚನೆಯಲ್ಲಿ ಆಕ್ಷೇಪಣೆ ಮತ್ತು ಸಲಹೆಗಳನ್ನು ನೀಡಲು 15 ದಿನಗಳ ಕಾಲಾವಕಾಶ ನೀಡಿ ರಾಜ್ಯಪತ್ರ ಹೊರಡಿಸಲಾಗಿತ್ತು.

ಕರಡು ಅಧಿಸೂಚನೆಯ ಪರವಾಗಿ 701 ಪತ್ರಗಳು ಸ್ವೀಕೃತವಾಗಿದ್ದು ಹಾಗೂ ಕೇವಲ 08 ಪತ್ರಗಳಲ್ಲಿ ಇದಕ್ಕೆ ಆಕ್ಷೇಪಿಸಿರುವುದರಿಂದ ಕರಡು ಅಧಿಸೂಚನೆಯಲ್ಲಿನ ನಿಯಮ ತಿದ್ದುಪಡಿಯನ್ನು 2025-26ನೇ ಸಾಲಿನಿಂದ ಅನುಷ್ಠಾನಗೊಳಿಸಲಾಗುತ್ತಿದೆ.

ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಂಬಂಧಪಟ್ಟಂತೆ ಅಭ್ಯರ್ಥಿಗಳು ಆಂತರಿಕ ಮೌಲ್ಯಮಾಪನ ಮತ್ತು ಬಾಹ್ಯ ಪರೀಕ್ಷೆ ಎರಡೂ ಸೇರಿ ಒಟ್ಟಾರೆ ಶೇಕಡಾ 33 ಅಂಕಗಳನ್ನು ಪಡೆದು, ಒಟ್ಟು 625 ಅಂಕಗಳಿಗೆ ಕನಿಷ್ಠ 206 ಅಂಕಗಳನ್ನು ಗಳಿಸಿದಲ್ಲಿ ಮತ್ತು ಆಯಾ ವಿಷಯದ ಒಟ್ಟು ಅಂಕಗಳಲ್ಲಿ ಕನಿಷ್ಠ ಶೇಕಡಾ 30 ಅಂಕಗಳನ್ನು ಪಡೆದಲ್ಲಿ ಅಂತಹ ಅಭ್ಯರ್ಥಿಯನ್ನು ಉತ್ತೀರ್ಣರೆಂದು ಘೋಷಿಸಲಾಗುತ್ತದೆ.

ದ್ವಿತೀಯ ಪಿಯುಸಿ ಪರೀಕ್ಷೆಗೆ ಸಂಬಂಧಪಟ್ಟಂತೆ, ಅಭ್ಯರ್ಥಿಗಳು ಪ್ರತಿ ವಿಷಯದ ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ ಶೇಕಡಾ 30 ಅಂಕಗಳನ್ನು ವಡೆಯಬೇಕು ಹಾಗೂ ಪ್ರತಿ ವಿಷಯದಲ್ಲೂ ಲಿಖಿತ ಮತ್ತು ಪ್ರಾಯೋಗಿಕ/ಆಂತರಿಕ ಅಂಕಗಳು ಸೇರಿ ಕನಿಷ್ಠ 30 ಅಂಕಗಳನ್ನು ಪಡೆದು ಒಟ್ಟಾರೆ ಶೇಕಡಾ 33 (600ಕ್ಕೆ 198) ಅಂಕಗಳನ್ನು ಪಡೆದಲ್ಲಿ ಅಂತಹ ಅಭ್ಯರ್ಥಿಯನ್ನು ಉತ್ತೀರ್ಣರೆಂದು ಘೋಷಿಸಲಾಗುತ್ತದೆ.

ಈ ನೂತನ ನಿಯಮವು 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹಾಜರಾಗುವ ಹೊಸ (REGULAR) ವಿದ್ಯಾರ್ಥಿಗಳು, ಪುನರಾವರ್ತಿತ (REPEATER) ಹಾಗೂ ಖಾಸಗಿ (PRIVATE) ಅಭ್ಯರ್ಥಿಗಳಿಗೂ ಅನ್ವಯವಾಗುತ್ತದೆ.

ಈ ಬದಲಾವಣೆಯು ರಾಜ್ಯದ ಶೈಕ್ಷಣಿಕ ವ್ಯವಸ್ಥೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. ಮುಂದಿನ ದಿನಗಳಲ್ಲಿ ಈ ಕುರಿತು ಮತ್ತಷ್ಟು ವಿವರಗಳನ್ನು ಮಂಡಳಿ ಪ್ರಕಟಿಸಲಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read