ಬಾಗಲಕೋಟೆ: ಪರೀಕ್ಷೆಯಲ್ಲಿ ನಕಲು ಮಾಡಿದ್ದಕ್ಕೆ ಕಾಲೇಜಿನ ಸಿಬ್ಬಂದಿ ಬುದ್ಧಿವಾದ ಹೇಳಿದ್ದರಿಂದ ಮನನೊಂದ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಭಾನುವಾರ ಘಟನೆ ನಡೆದಿದೆ. ಶಾರದಾ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದ ಹೀರೆಕೇರಿ ಗಲ್ಲಿಯ ನಿವಾಸಿ ತೇಜಸ್ವಿನಿ(17) ಆತ್ಮಹತ್ಯೆ ಮಾಡಿಕೊಂಡವರು.
ಫೆಬ್ರವರಿ 27ರಂದು ವಾರ್ಷಿಕ ಪರೀಕ್ಷೆಯ ಸಂದರ್ಭದಲ್ಲಿ ನಕಲು ಮಾಡುವಾಗ ಸಿಕ್ಕಿಬಿದ್ದಿದ್ದರು. ಕಾಲೇಜಿನ ಸಿಬ್ಬಂದಿ ಪ್ರಶ್ನಿಸಿ ಪೋಷಕರಿಗೆ ವಿಷಯ ತಿಳಿಸಿದ್ದರು. ಸಿಬ್ಬಂದಿ ಸಿಸಿಟಿವಿ ಪರಿಶೀಲಿಸಲು ಮುಂದಾದಾಗ ಅಲ್ಲಿಂದ ತೆರಳಿದ ವಿದ್ಯಾರ್ಥಿನಿ ಮಹಾರಾಣಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.