ಭೋಪಾಲ್: ವಾರದ ಹಿಂದೆ ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿನಿ ಇದೀಗ ಏಕಾಏಕಿ ಎಲೆಕ್ಟ್ರಿಷಿಯನ್ ಓರ್ವನನ್ನು ವಿವಾಹವಾಗಿ ಬಂದಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.
ಅಂತಿಮ ವರ್ಷದ ಬಿಬಿಎ ವಿದ್ಯಾರ್ಥಿನಿ ವಾರದ ಹಿಂದೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ವಿದ್ಯಾರ್ಥಿನಿಯನ್ನು ಶ್ರದ್ಧಾ ಎಂದು ಗುರುತಿಸಲಾಗಿದೆ. ಕರಣ್ ದೀಪ್ ಎಂಬ ಎಲೆಕ್ಟ್ರಿಷಿಯನ್ ನ ವಿವಾಹವಾಗಿ ನೇರವಾಗಿ ಪೊಲೀಸ್ ಠಾಣೆಗೆ ಆಗಮಿಸಿದ್ದಾಳೆ.
ಇಂದೋರ್ ನಿಂದ ರತ್ಲಂ ಗೆ ರೈಲು ಹತ್ತಿದ್ದ ವಿದ್ಯಾರ್ಥಿನಿ, ರೈಲಿನಲ್ಲಿ ಕರಣ್ ದೀಪ್ ನನ್ನು ಭೇಟಿಯಾಗಿದ್ದಾಳೆ. ಬಳಿಕ ಇಬ್ಬರೂ ಮಂದ್ಸೌರ್ ಗೆ ತೆರಳಿದ್ದಾರೆ. ಅಲ್ಲಿಂದ ಮಹೇಶ್ವರಕ್ಕೆ ತೆರಳಿ ಅಲ್ಲಿ ದೇವಸ್ಥಾನವೊಂದರಲ್ಲಿ ಇಬ್ಬರೂ ಮದುವೆಯಾಗಿದ್ದಾರೆ. ಬಳಿಕ ನೇರವಾಗಿ ಇಂದೋರ್ ಪೊಲೀಸ್ ಠಾಣೆಗೆ ಬಂದಿದ್ದಾರೆ.
ಆರಂಭದಲ್ಲಿ ಶ್ರದ್ಧಾ ತನ್ನ ಸ್ನೇಹಿತ ಸಾರ್ಥಕ್ ನೊಂದಿಗೆ ಹೋಗಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ಸಾರ್ಥಕ್ ಗೂ ಗೊತ್ತಿಲ್ಲದೇ ಆಕೆ ಕರಣ್ ದೀಪ್ ಎಂಬಾತನನ್ನು ವಿವಾಹವಾಗಿ ಬಂದಿದ್ದಾಳೆ ಎನ್ನಲಾಗಿದೆ.
ಈ ನಡುವೆ ಶ್ರದ್ಧಾಳ ಮಾನಸಿಕ ಸ್ಥಿತಿ ಸರಿಯಿಲ್ಲ. ಆಕೆ ಮದುವೆಯಾಗಿದ್ದಾಳೆ ಎಂಬುದನ್ನು ನಾನು ಒಪ್ಪಲು ಸಾಧ್ಯವಿಲ್ಲ ಎಂದು ಶ್ರದ್ಧಾಳ ತಂದೆ ಅನಿಲ್ ತಿವಾರಿ ಹೇಳಿದ್ದಾರೆ. ನಿಮ್ಮ ಮಗಳ ಮಾನಸಿಕ ಸ್ಥಿತಿ ಸರಿಯಿಲ್ಲ. ಆಕೆ ಆತ್ಮಹತ್ಯೆಗೆ ಯತ್ನಿಸಿದ್ದ ವೇಳೆ ರೈಲು ನಿಲ್ದಾಣದಲ್ಲಿ ತಾನು ಆಕೆಯನ್ನು ರಕ್ಷಿಸಿದ್ದಾಗಿ ಕರಣ್ ದೀಪ್ ತನಗೆ ಸ್ವತಃ ಹೇಳಿದ್ದಾನೆ ಎಂದು ಅನಿಲ್ ತಿವಾರಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.
ಶ್ರದ್ಧಾ ಕಾಣೆಯಾಗಿದ್ದಾಗ ಅವಳ ಬಗ್ಗೆ ಮಾಹಿತಿ ನೀಡಿದವರಿಗೆ ಕುಟುಂಬವು 51,000 ಬಹುಮಾನ ಘೋಷಿಸಿತ್ತು. ಇದೀಗ ಪ್ರತ್ಯಕ್ಷವಾಗಿರುವ ಮಗಳು ಬೇರೆಯದೇ ಕಥೆ ಹೇಳುತ್ತಿದ್ದಾಳೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶ್ರದ್ಧಾ ಹಾಗೂ ಕರಣ್ ದೀಪ್ ನ ವಿಚಾರಣೆ ನಡೆಸಿದ್ದಾರೆ.