ನವಿ ಮುಂಬೈ: ಮರಾಠಿಯಲ್ಲಿ ಬರೆದ ಮದುವೆ ಆಮಂತ್ರಣ ಪತ್ರಗಳನ್ನು ಹಂಚಿದ್ದಕ್ಕಾಗಿ ನವಿ ಮುಂಬೈನ ವಾಶಿಯ ಕಾಲೇಜೊಂದರಲ್ಲಿ ವಿದ್ಯಾರ್ಥಿಯೊಬ್ಬನಿಗೆ ಥಳಿಸಲಾಗಿದೆ. ಈ ಘಟನೆ ಭಾಷಾ ವಿವಾದಕ್ಕೆ ಸಂಬಂಧಿಸಿದಂತೆ ಉದ್ವಿಗ್ನ ಪರಿಸ್ಥಿತಿಯನ್ನು ಸೃಷ್ಟಿಸಿದೆ.
ವರದಿಗಳ ಪ್ರಕಾರ, ವಾಶಿಯ ಕಾಲೇಜಿನಲ್ಲಿ 20 ವರ್ಷದ ಮರಾಠಿ ವಿದ್ಯಾರ್ಥಿಯೊಬ್ಬ ಮದುವೆ ಆಮಂತ್ರಣ ಪತ್ರಗಳನ್ನು ಹಂಚಿದ್ದಾರೆ. ಈ ವೇಳೆ, ಕೆಲ ಮರಾಠಿಯೇತರ ವಿದ್ಯಾರ್ಥಿಗಳು ಮರಾಠಿ ಭಾಷೆಯ ಆಮಂತ್ರಣ ಪತ್ರಗಳನ್ನು ಸ್ವೀಕರಿಸಲು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ವಾಗ್ವಾದಕ್ಕೆ ತಿರುಗಿದ್ದು, ಪರಿಸ್ಥಿತಿ ಉಲ್ಬಣಗೊಂಡು ಆ ವಿದ್ಯಾರ್ಥಿಗೆ ಹಾಕಿ ಸ್ಟಿಕ್ನಿಂದ ಥಳಿಸಲಾಗಿದೆ ಎನ್ನಲಾಗಿದೆ.
ಈ ಘಟನೆ ರಾಜಕೀಯ ತಿರುವು ಪಡೆದುಕೊಂಡಿದೆ. ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಮಧ್ಯಪ್ರವೇಶಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದೆ. ಎಂಎನ್ಎಸ್ ನಾಯಕ ಗಜಾನನ್ ಕಾಳೆ ಅವರು ವಾಶಿ ಪೊಲೀಸರನ್ನು ಭೇಟಿ ಮಾಡಿ ದೂರು ದಾಖಲಿಸಿದ್ದಾರೆ.
ಕೇವಲ ಒಂದು ಸಣ್ಣ ಜಗಳವಲ್ಲದೆ, ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚುತ್ತಿರುವ ‘ಮರಾಠಿ ವರ್ಸಸ್ ಮರಾಠಿಯೇತರ’ ಸಂಘರ್ಷದ ಒಂದು ಉದಾಹರಣೆ ಎಂದು ಎಂಎನ್ಎಸ್ ಆರೋಪಿಸಿದೆ. “ನಿಶಿಕಾಂತ್ ದುಬೆ ಅವರಂತಹ ಸಂಸದರು ಇಂತಹ ವಿವಾದಗಳಿಗೆ ಪ್ರಚೋದನೆ ನೀಡುತ್ತಿದ್ದರೆ, ಈ ವಿವಾದ ಈಗ ಕಾಲೇಜುಗಳನ್ನೂ ತಲುಪಿದೆ ಎಂಬುದು ಸ್ಪಷ್ಟವಾಗುತ್ತದೆ” ಎಂದು ಗಜಾನನ್ ಕಾಳೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಭಾಷೆ ಆಧಾರಿತ ಭಿನ್ನಾಭಿಪ್ರಾಯಕ್ಕೆ ನಡೆದ ಹಿಂಸಾತ್ಮಕ ಪ್ರತಿಕ್ರಿಯೆಯನ್ನು ಎಂಎನ್ಎಸ್ ಖಂಡಿಸಿದ್ದು, ಮರಾಠಿ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಶೈಕ್ಷಣಿಕ ಹಿತಾಸಕ್ತಿಗಳನ್ನು ಖಚಿತಪಡಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಪೊಲೀಸರು ಫೈಜಾನ್ ನಾಯಕ್ ಸೇರಿದಂತೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ.