ಶಿವಮೊಗ್ಗ: ಅಪ್ರಾಪ್ತ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಸಾಗರದ 21 ವರ್ಷದ ವಿದ್ಯಾರ್ಥಿಯನ್ನು ಬಂಧಿಸಿದ್ದು, ನವೆಂಬರ್ 11 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಬಗ್ಗೆ ಸಾಗರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಅಪ್ರಾಪ್ತೆ ಗರ್ಭಪಾತ ಮತ್ತು ಪೋಕ್ಸೊ ಪ್ರಕರಣವನ್ನು ಗಮನಕ್ಕೆ ತಾರದ ಕಾರಣ ಸರ್ಕಾರಿ ಆಸ್ಪತ್ರೆಯ ವೈದ್ಯೆ ಸೇರಿ 9 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಸರ್ಕಾರಿ ಪ್ರಸೂತಿ ತಜ್ಞೆ ಡಾ. ಪ್ರತಿಮಾ ಅವರು ಖಾಸಗಿ ಆಸ್ಪತ್ರೆಯಲ್ಲಿ ಅಪ್ರಾಪ್ತೆಗೆ ಗರ್ಭಪಾತ ಮಾಡಿದ್ದಾರೆ. ಪೋಕ್ಸೊ ಪ್ರಕರಣವನ್ನು ಪೊಲೀಸರ ಗಮನಕ್ಕೆ ತಂದಿಲ್ಲ. ಈ ಹಿನ್ನೆಲೆಯಲ್ಲಿ ಪೋಕ್ಸೊ ಕಾಯ್ದೆ ಅಡಿಯಲ್ಲಿ ಆರೋಪಿಯಾಗಿ ಅವರ ವಿರುದ್ಧ ದೂರು ದಾಖಲಿಸಲಾಗಿದೆ.
ಮಧ್ಯವರ್ತಿಗಳಾಗಿದ್ದ ಕುಮಾರ್ ಮತ್ತು ಪರಮೇಶ್ವರ ಅವರ ಮೇಲೆಯೂ ದೂರು ದಾಖಲಾಗಿದೆ. ಖಾಸಗಿ ಚಾಂದಿನಿ ಆಸ್ಪತ್ರೆಯ ವೈದ್ಯರೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದುವರೆಗೂ ವೈದ್ಯರು ಹಾಗೂ ಮಧ್ಯವರ್ತಿಗಳನ್ನು ಬಂಧಿಸಿಲ್ಲ. ತನಿಖೆ ಮುಂದುವರೆದಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ. ಬೆನಕ ಪ್ರಸಾದ್ ತಿಳಿಸಿದ್ದಾರೆ.
ಆರೋಪಿ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಆತನ ತಂದೆ, ತಾಯಿ ಸೇರಿದಂತೆ ಅಪ್ರಾಪ್ತೆಯ ತಂದೆ, ತಾಯಿ ಮೇಲೆಯೂ ಪೋಕ್ಸೊ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
