ಥಾಣೆ: ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಅಟ್ಟಹಾಸ ಹೆಚ್ಚುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಬೀದಿನಾಯಿಗಳ ಕಡಿವಾಣಕ್ಕೆ ಮುಂದಾಗಿಲ್ಲ. ಬೀದಿನಾಯಿಯೊಂದು ಒಂದೆ ದಿನದಲ್ಲಿ 67 ಜನರಿಗೆ ಕಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಥಾಣೆ ಜಿಲ್ಲೆಯ ಕಲ್ಯಾಣ ಮತ್ತು ಡೊಂಬಿವ್ಲಿ ಪ್ರದೇಶದಲ್ಲಿ ಒಂದೇ ದಿನದಲ್ಲಿ ಬೀದಿ ನಾಯಿ 67 ಜನರಿಗೆ ಕಚ್ಚಿದ್ದು, ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ.
ಕಳೆದ ಕೆಲ ದಿನಗಳಿಂದ ಈ ಪ್ರದೇಶದಲ್ಲಿ ಅಷ್ಟಾಗಿ ಬೀದಿನಾಯಿಗಳ ದಾಳಿ ಇರಲಿಲ್ಲ. ಆದರೆ ಇದೀಗ ಒಂದೇ ದಿನದಲ್ಲಿ 67 ಜನರಿಗೆ ನಾಯಿ ಕಡಿದಿರುವ ಪ್ರಕರಣ ದಾಖಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿ ಡಾ.ದೀಪಾ ಶುಕ್ಲಾ ತಿಳಿಸಿದ್ದಾರೆ.
ನಾಯಿ ಕಡಿತಕ್ಕೆ ಒಳಗಾದವರಿಗೆ ರೇಬಿಸ್ ನಿರೋಧಕ ಲಸಿಕೆ ಸೇರಿದಂತೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಬೀದಿನಾಯಿಗಳ ಸಂಖ್ಯೆ ನಿಯಂತ್ರಣಕ್ಕೆ ಕೆಡಿಎಂಸಿ ನಿಯಮಿತವಾಗಿ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸುತ್ತಿದೆ. ಪ್ರತಿ ತಿಂಗಳು 1000ದಿಂದ 1100 ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.