ಬೆಂಗಳೂರು: ರಾಜ್ಯದ ಪೊಲೀಸ್ ಕಾನ್ಸ್ಟೇಬಲ್ ಗಳು, ಹೆಡ್ ಕಾನ್ಸ್ಟೇಬಲ್ ಗಳು ಧರಿಸುವ ಟೋಪಿ ಸ್ಲೋಚ್ ಹ್ಯಾಟ್ ಬದಲಾವಣೆಗೆ ಸಂಬಂಧಿಸಿದಂತೆ ಅಭಿಪ್ರಾಯ ಸಂಗ್ರಹಿಸಲು ರಾಜ್ಯ ಸಶಸ್ತ್ರ ಮೀಸಲು ಪಡೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಉಮೇಶ್ ಕುಮಾರ್ ನೇತೃತ್ವದ ಸಮಿತಿ ತೀರ್ಮಾನಿಸಿದೆ.
ನಗರದ ರಾಜ್ಯ ಪೊಲೀಸ್ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಟೋಪಿ ಬದಲಾವಣೆಗೆ ಸಂಬಂಧಿಸಿದಂತೆ ಎಡಿಜಿಪಿ ನೇತೃತ್ವದಲ್ಲಿ ಶುಕ್ರವಾರ ಹಿರಿಯ ಅಧಿಕಾರಿಗಳ ಸಭೆ ನಡೆಸಲಾಗಿದೆ. ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಟೋಪಿ ಬದಲಾವಣೆ ಸಾಧಕ ಬಾಧಕಗಳ ಕುರಿತಾಗಿ ಸಿಬ್ಬಂದಿಯ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ಟೋಪಿ ಬದಲಾವಣೆಯ ಕುರಿತಾಗಿ ಮೊದಲ ಹಂತದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಟೋಪಿ ಧರಿಸುವ ಪೊಲೀಸರ ಅಭಿಪ್ರಾಯ ಕೂಡ ಮುಖ್ಯವಾಗಿದೆ. ಹೀಗಾಗಿ ಪ್ರತಿ ವಿಭಾಗದ ಪೊಲೀಸರ ಅಭಿಪ್ರಾಯ ಪಡೆದುಕೊಂಡು ಪರಿಶೀಲನೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉಮೇಶ್ ಕುಮಾರ್ ಹೇಳಿದ್ದಾರೆ.