ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಸಂಘವು ಮೇ 06 ರ ಮಂಗಳವಾರದಂದು ಡಿ.ಸಿ.ಕಾಂಪೌಂಡ್ನಲ್ಲಿರುವ ಸರ್ಕಾರಿ ನೌಕರರ ಭವನದ ಸಭಾಂಗಣದಲ್ಲಿ ಶಿವಮೊಗ್ಗ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ 2023ನೇ ಸಾಲಿನ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕ್ರೀಡಾಕೂಟದಲ್ಲಿ ವಿಜೇತರಾದ ಸರ್ಕಾರಿ ನೌಕರರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಿದೆ.
ಈ ಸಮಾರಂಭದ ಉದ್ಘಾಟನೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪನವರು ನೆರವೇರಿಸಲಿದ್ದಾರೆ. ಶಾಸಕ ಎಸ್.ಎನ್.ಚನ್ನಬಸಪ್ಪನವರು ಕ್ರೀಡಾಕೂಟದ ಅಧ್ಯಕ್ಷತೆಯನ್ನು ವಹಿಸಲಿದ್ದು, ಸಂಸದ ಬಿ.ವೈ.ರಾಘವೇಂದ್ರ, ಕೆ.ಆರ್.ಐ.ಡಿ.ಎಲ್ ಅಧ್ಯಕ್ಷರು ಹಾಗೂ ಬಿ.ಕೆ.ಸಂಗಮೇಶ್ವರ, ಅರಣ್ಯ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಮತ್ತು ಶಾಸಕ ಗೋಪಾಲಕೃಷ್ಣ ಬೇಳೂರು, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿರವರು ಹಾಗೂ ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು, ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು, ಗಣ್ಯರು ಮತ್ತು ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.
ಕರ್ನಾಟಕ ನಾಗರೀಕ ಸೇವೆಯಲ್ಲಿ ಉತ್ತಮ ಸೇವೆ ಸಲ್ಲಿಸಿ ವಿಶೇಷ ಸಾಧನೆ ಮಾಡಿದ 10 ಜನ ಸರ್ಕಾರಿ ಅಧಿಕಾರಿ-ನೌಕರರಿಗೆ 2023ನೇ ಸಾಲಿನ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಏಪ್ರಿಲ್ 05 ಮತ್ತು 06 ರಂದು ನಡೆದ ಕ್ರೀಡಾಕೂಟದಲ್ಲಿ ವಿಜೇತರಾದ ಸರ್ಕಾರಿ ನೌಕರರಿಗೆ ಬಹುಮಾನ ವಿತರಣೆ ಮಾಡಲಾಗುವುದು. ವಿಜೇತರಾದ ಜಿಲ್ಲೆಯ ಸರ್ಕಾರಿ ನೌಕರರು ಮಧ್ಯಾಹ್ನ 3.30 ಕ್ಕೆ ಸರಿಯಾಗಿ ಸರ್ಕಾರಿ ನೌಕರರ ಭವನದಲ್ಲಿ ಹಾಜರಿದ್ದು, ಪ್ರಮಾಣ ಪತ್ರಗಳನ್ನು ಸ್ವೀಕರಿಸುವುದು..
ಈ ಸಮಾರಂಭದಲ್ಲಿ ಭಾಗವಹಿಸುವ ಅಧಿಕಾರಿ ಹಾಗೂ ನೌಕರರಿಗೆ ಓಓಡಿ ಸೌಲಭ್ಯವನ್ನು ಜಿಲ್ಲಾಧಿಕಾರಿಗಳು ಮಂಜೂರು ಮಾಡಿರುತ್ತಾರೆ. ಜಿಲ್ಲೆಯ ಸರ್ಕಾರಿ ನೌಕರರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸುವಂತೆ ಸಂಘದ ಜಿಲ್ಲಾಧ್ಯಕ್ಷ ಆರ್. ಮೋಹನ್ಕುಮಾರ್ ಕೋರಿರುತ್ತಾರೆ.