ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡ ಐಪಿಎಲ್ ಟ್ರೋಫಿ ಗೆದ್ದ ಸಂದರ್ಭದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜೂನ್ 4ರಂದು ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ದುರಂತಕ್ಕೆ ಸಂಭವಿಸಿದಂತೆ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ. ಕುನ್ಹಾ ನೇತೃತ್ವದ ವಿಚಾರಣಾ ಆಯೋಗ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ವಿಧಾನಸೌಧದ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ನ್ಯಾಯಮೂರ್ತಿ ಮೈಕೆಲ್ ಡಿ ಕುನ್ಹಾ ಅವರು ಎರಡು ಸಂಪುಟಗಳಲ್ಲಿರುವ ವಿಚಾರಣಾ ಆಯೋಗದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದಾರೆ.
ಜುಲೈ 17ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ವರದಿಯಲ್ಲಿರುವ ಶಿಫಾರಸುಗಳ ಬಗ್ಗೆ ಚರ್ಚೆ ನಡೆಸಿ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ.
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದರು. ಘಟನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಗರ ಪೊಲೀಸ್ ಆಯುಕ್ತ, ಡಿಸಿಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿತ್ತು. ಬೆಂಗಳೂರು ನಗರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮ್ಯಾಜಿಸ್ಟ್ರಿಯಲ್ ತನಿಖೆ, ಜಾನ್ ಮೈಕೆಲ್ ಡಿ ಕುನ್ಹಾ ನೇತೃತ್ವದ ವಿಚಾರಣಾ ಆಯೋಗದಿಂದ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿತ್ತು.
ಈ ಬಗ್ಗೆ ಮಾಹಿತಿ ನೀಡಿರುವ ಸಿಎಂ ಸಿದ್ಧರಾಮಯ್ಯ, ಆರ್.ಸಿ.ಬಿ. ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಕಾಲ್ತುಳಿತಕ್ಕೆ ಸಿಕ್ಕು 11 ಜನ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಅವಘಡದ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಕುನ್ಹಾ ಅವರ ಅಧ್ಯಕ್ಷತೆಯಲ್ಲಿ ರಚಿಸಿದ್ದ ಏಕ ಸದಸ್ಯ ಆಯೋಗವು ಇಂದು ಎರಡು ಸಂಪುಟಗಳಲ್ಲಿ ವರದಿ ಸಲ್ಲಿಸಿದೆ.
ವರದಿಯಲ್ಲಿ ಮಾಡಿರುವ ಶಿಫಾರಸುಗಳ ಬಗ್ಗೆ ಚರ್ಚಿಸಿದ ನಂತರ ಸಂಪುಟ ನಿರ್ಧಾರ ಮಾಡಲಿದೆ. ವರದಿ ಈಗಷ್ಟೇ ಸಲ್ಲಿಕೆಯಾಗಿರುವುದರಿಂದ ನಾನು ವರದಿಯನ್ನು ಪೂರ್ಣವಾಗಿ ಓದಿಲ್ಲ. ಜುಲೈ 17 ರಂದು ನಡೆಯಲಿರುವ ಸಚಿವ ಸಂಪುಟದಲ್ಲಿ ಈ ವರದಿಯನ್ನು ಮಂಡಿಸಿ, ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.