ಮಂಗಳೂರು: ರೌಡಿಶೀಟರ್, ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯ ನಂತರ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ನಡೆದ ಚಾಕು ಇರಿತ ಪ್ರಕರಣಗಳಿಗೆ ಸಂಬಂಧಿಸಿದಂತೆ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಉಳ್ಳಾಲ, ಕಂಕನಾಡಿ, ಕಾವೂರು ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಇರಿತ ಮತ್ತು ಹಲ್ಲೆ ಘಟನೆಗಳಿಗೆ ಸಂಬಂಧಿಸಿದಂತೆ ಒಟ್ಟು 7 ಆರೋಪಿಗಳನ್ನು ಬಂಧಿಸಲಾಗಿದೆ.
ಮೇ 2 ರಂದು ಬೆಳಗಿನ ಜಾವ 3.30 ರ ಸುಮಾರಿಗೆ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಣ್ಣೂರಿನಲ್ಲಿ ನೌಶಾದ್(39) ಎಂಬವರಿಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಲೋಹಿತಾಶ್ವ, ಪುನೀತ್, ಗಣೇಶ್ ಪ್ರಸಾದ್ ಬಂಧಿತ ಆರೋಪಿಗಳು. ಅದೇ ದಿನ ಆರೋಪಿಗಳು ತೊಕ್ಕೊಟ್ಟು ಸಮೀಪ ಉಳ್ಳಾಲ ನಿವಾಸಿ ಫೈಸಲ್(40) ಎನ್ನುವರ ಮೇಲೆ ದಾಳಿ ಮಾಡಿ ಚಾಕು ಇರಿತ ಘಟನೆಯಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಮೀನು ವ್ಯಾಪಾರಿ ಮಹಮ್ಮದ್ ಲುಕ್ಮಾನ್ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಮೇ 2ರಂದು ಬೆಳಗ್ಗೆ 6:45 ಕ್ಕೆ ದೇರೆಬೈಲು ಕೊಂಚಾಡಿ ಸಮೀಪ ಐದಾರು ಜನರ ಗುಂಪು ಇನೋವಾ ಕಾರ್ ನಲ್ಲಿ ಬಂದು ವಾಗ್ವಾದ ನಡೆಸಿ ಹಲ್ಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಿಖಿತ್, ರಾಕೇಶ್, ಧನಂಜಯ, ಪ್ರಸಾದ್ ಶೆಟ್ಟಿ ಎನ್ನುವರನ್ನು ಬಂಧಿಸಲಾಗಿದೆ, ಕಾವೂರು ಪೊಲೀಸ್ ಠಾಣೆಯಲ್ಲಿ ಮಹಮ್ಮದ್ ಲುಕ್ಮಾನ್ ದೂರು ದಾಖಲಿಸಿದ್ದರು.