ಶಿವಮೊಗ್ಗ: ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ ಈಗಿನಂತೆಯೇ ವರ್ಷಕ್ಕೆ ಮೂರು ಬಾರಿ ಮುಂದುವರೆಯಲಿದೆ. ಅದನ್ನು ಎರಡು ಸಲಕ್ಕೆ ಇಳಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲವೆಂದು ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಎಸ್ಎಸ್ಎಲ್ಸಿ ಪರೀಕ್ಷೆಗಳ ಸಂಖ್ಯೆಯನ್ನು ಎರಡು ಬಾರಿಗೆ ಇಳಿಕೆ ಮಾಡಲಾಗುವುದು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದರಿಂದ ಮಕ್ಕಳಲ್ಲಿ ಗೊಂದಲ ಉಂಟಾಗುತ್ತದೆ. ಅವರು ಧೈರ್ಯ ಕಳೆದುಕೊಳ್ಳುತ್ತಾರೆ. ಇಂತಹ ವಿಷಯಗಳಲ್ಲಿ ಅನಗತ್ಯ ಚರ್ಚೆ ಬೇಡ ಎಂದು ಹೇಳಿದ್ದಾರೆ.
ಎಸ್ಎಸ್‍ಎಲ್‍ಸಿ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ತರುವುದಿಲ್ಲ. ತರುವುದಾದರೆ ಸರ್ಕಾರದ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಈಗಿನಂತೆ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ ವರ್ಷಕ್ಕೆ ಮೂರು ಬಾರಿಯೇ ಇರಲಿದೆ ಎಂದು ಹೇಳಿದ್ದಾರೆ.
