ಮಂಗಳೂರು: ಕೊಲ್ಲೂರು ಮೂಕಾಂಬಿಕಾ ದೇವಿ ದೇವಸ್ಥಾನಕ್ಕೆ ಆಗಮಿಸಿದ್ದ ಬೆಂಗಳೂರು ಮೂಲದ ಮಹಿಳೆಯೊಬ್ಬರು ಸೌಪರ್ಣಿಕಾ ನದಿಗೆ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.
ವಸುಧಾ (46) ನೀರಿನಲ್ಲಿ ಕೊಚ್ಚಿ ಹೋಗಿರುವ ಮಹಿಳೆ. ಬೆಂಗಳೂರು ಮೂಲದವರು. ಕೊಲ್ಲೂರು ಮೂಕಾಂಬಿಕಾ ದೇವಿ ಭಕ್ತೆಯಾಗಿರುವ ವಸುಧಾ ಆಗಾಗ ದೇವಸ್ಥಾನಕ್ಕೆ ಬರುತ್ತಿದ್ದರು. ಈ ಬಾರಿಯೂ ಕಾರಿನಲ್ಲಿ ದೇವಸ್ಥಾಅನಕ್ಕೆ ಆಗಮಿಸಿದ್ದ ವಸುಧಾ, ದೇವಿ ದರ್ಶನದ ಬಳಿಕ ಸೌಪರ್ಣಿಕಾ ನದಿಯತ್ತ ಹೋಗಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದಿದ್ದಾರೆ.
ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಇದನ್ನು ಕಂಡ ದೇವಾಲಯದ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಮುಳುಗು ತಜ್ಞರು, ಪೊಲೀಸ್ ಸಿಬ್ಬಂದಿ ಮಹಿಳೆಗಾಗಿ ಶೋಧಕಾರ್ಯ ನಡೆಸಿದ್ದಾರೆ. ಆದರೆ ಈವರೆಗೂ ಮಹಿಳೆಯ ಸುಳಿವು ಸಿಕ್ಕಿಲ್ಲ. ವಸುಧಾ ಅವರ ಕಾರು ನದಿ ಬಳಿ ಪತ್ತೆಯಾಗಿದ್ದು, ಅದರಲ್ಲಿ ಅವರ ಮೊಬೈಲ್ ಕೂಡ ಪತ್ತೆಯಾಗಿದೆ. ನದಿಯಲ್ಲಿ ನೀರಿನ ರಭ ಹೆಚ್ಚಿರುವುದರಿಂದ ಹಾಗೂ ಮಳೆ ಕೂಡ ಶೋಧ ಕಾರ್ಯಾಚರಣೆಗೆ ಅಡ್ಡಿಯಾಗಿದೆ.