ಕಾರವಾರ: ಅತ್ತೆಯನ್ನೇ ಕೊಲೆ ಮಾಡಿದ ಅಳಿಯನನ್ನು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿರಸಿ ತಾಲೂಕಿನ ದೊಡ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಕ್ಕಲಕೊಪ್ಪದಲ್ಲಿ ಶುಕ್ರವಾರ ಘಟನೆ ನಡೆದಿದೆ.
ಬಸವರಾಜ ಮುಟ್ಟಪ್ಪ ನಾಯ್ಕ(42) ಬಂಧಿತ ಆರೋಪಿಯಾಗಿದ್ದಾನೆ. ಕಮಲಾ ನಾರಾಯಣ ನಾಯ್ಕ(70) ಮೃತಪಟ್ಟ ಮಹಿಳೆ. ಆರೋಪಿ ಬಸವರಾಜನ ಪತ್ನಿ ಗೀತಾ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ತಾಯಿ ಮತ್ತು ಪತಿಯ ನಡುವೆ ಪ್ರತಿದಿನ ಸಣ್ಣ ವಿಷಯಕ್ಕೂ ಗಲಾಟೆಯಾಗುತ್ತಿತ್ತು. ಜುಲೈ 10 ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಇಬ್ಬರ ನಡುವೆ ಗಲಾಟೆಯಾಗಿದೆ. ಆಗ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದು, ಪತಿ ಬಸವರಾಜ ನಾಯ್ಕ ಮೇಲೆ ಕ್ರಮ ಜರುಗಿಸಬೇಕೆಂದು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.