ಶಿವಮೊಗ್ಗ : ಇದುವರೆಗೆ 1 ಕೋಟಿ 10 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಭತ್ಯೆ ನೀಡಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಇಂದು ನಗರದ ಅಲ್ಲಮಪ್ರಭು ಮೈದಾನದಲ್ಲಿ ಏರ್ಪಡಿಸಿದ್ದ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದರು.
ಹೆಣ್ಣು ಕುಟುಂಬದ ಕಣ್ಣು. ಅವರ ಕುಟುಂದಲ್ಲಿ ಭಾಗ್ಯೋದಯವಾಗಲೆಂದು ಗೃಹಲಕ್ಷ್ಮಿ ಯೋಜನೆಯನ್ನು ಬೆಳಗಾವಿಯಲ್ಲಿ ಚಾಲನೆ ನೀಡಿ, ಇದುವರೆಗೆ 1 ಕೋಟಿ 10 ಲಕ್ಷ, ಮಹಿಳೆಯರಿಗೆ ರೂ.2000 ಭತ್ಯೆ ನೀಡಲಾಗಿದ್ದು ರಾಷ್ಟ್ರದಲ್ಲೇ ಇದೊಂದು ಇತಿಹಾಸ.
ಗೃಹಜ್ಯೋತಿ ಯೋಜನೆಯಡಿ ಇದುವರೆಗೆ 1.5 ಕೋಟಿ ಜನರಿಗೆ ಉಚಿತ 200 ಯುನಿಟ್ ವಿದ್ಯುತ್ ನೀಡಲಾಗಿದೆ. ಅನ್ನ ಭಾಗ್ಯ ಯೋಜನೆಯಡಿ 5 ಕೆ ಜಿ ಜೊತೆ ಇನ್ನುಳಿದ ಐದು ಕೆಜಿ ಅಕ್ಕಿ ಬದಲು ಪ್ರತಿ ಸದಸ್ಯರಿಗೆ ಒಂದು ಕೆಜಿಗೆ ರೂ.34 ರಂತೆ ನೀಡಲಾಗುತ್ತಿದೆ.
ಪ್ರಸ್ತುತ ಬೆಲೆ ಏರಿಕೆ ಸಂಕಷ್ಟದಲ್ಲಿ ಸರ್ಕಾರ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಶಕ್ತಿ ಯೋಜನೆ ಜಾರಿಗೊಳಿಸಿದೆ. ಹಾಗೂ ಪ್ರಸ್ತುತ ಹೊಸದಾಗಿ 1000 ಬಸ್ ಖರೀದಿ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳಿಗಾಗಿ ಈ ಬಜೆಟ್ ನಲ್ಲಿ 50 ಸಾವಿರ ಕೊಟಿ ಮೀಸಲು ಇಡಲಾಗಿದೆ.
ಶಿಕ್ಷಣದಲ್ಲಿ ಗುಣಮಟ್ಟ ತರಲು, ರೈತರು, ಕಾರ್ಮಿಕರು, ಶಿಕ್ಷಕರು ಹಾಗೂ ಎಲ್ಲ ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸರ್ಕಾರದ ಹಂತದಲ್ಲಿ ಸಮಿತಿ ರಚಿಸಿ ಕೋಟಿಗೂ ಹೆಚ್ಚು ಬಂಡವಾಳ ಹಾಕಿ ಕೆಪಿಎಸ್, ಸಿಎಸ್ ಆರ್ ಮಾದರಿ ಶಾಲೆಗಳನ್ನು ತೆರೆಯುವ ಯೋಜನೆ ಮೂಲಕ ದೊಡ್ಡ ನಗರದಲ್ಲಿ ದೊರೆಯುವಂತಹ ಶಿಕ್ಷಣ ಹಳ್ಳಿಮಕ್ಕಳಿಗೂ ಸಿಗವಂತಹ ಕಾರ್ಯಕ್ರಮ ರೂಪಿಸಿದ್ದೇವೆ ಎಂದರು.
ಯುವನಿಧಿ ಯೋಜನೆ ಮೂಲಕ ಪದವಿ ಪೂರ್ಣಗೊಳಿಸಿದವರಿಗೆ ರೂ.3 ಸಾವಿರ ಹಾಗೂ ಡಿಪ್ಲೊಮಾದಾರರಿಗೆ ರೂ.1500 ನೀಡುವ ಮೂಲಕ ಯುವಜನರಿಗೆ ಆಶಾಕಿರಣವಾಗಿದ್ದು ಐದು ಗ್ಯಾರಂಟಿ ಯೋಜನೆಗಳು ಜನರಲ್ಲಿ ಶಕ್ತಿ ತುಂಬಿದೆ ಎಂದರು.
ಮುಂದಿನ ದಿನದಲ್ಲಿ ಎಲ್ಲ ವರ್ಗದವರಿಗೆ 35 ರ್ಷದ ಮಿತಿಯೊಳಗೆ ಅರಣ್ಯ ಹಕ್ಕು ನೀಡಲು ಸರ್ಕಾರ ಬದ್ದವಾಗಿದೆ. ಅಧಿಕಾರಿಗಳು ಬಡವರನ್ನು ಒಕ್ಕಲೆಬ್ಬಿಸಬಾರದು. ಶರಾವತಿ ಸಂತ್ರಸ್ತರ ರಕ್ಷಣೆ ಬಗ್ಗೆ ನಮ್ಮ ಬದ್ದತೆ ಇದ್ದು ಬಡತನ ನಿರ್ಮೂಲನೆ ನಮ್ಮ ಯುದ್ದವಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.