ಬೆಂಗಳೂರು: ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ(ಮುಡಾ) ನಿವೇಶನ ಹಗರಣ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶಾನಲಯ(ಇಡಿ) ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ವಿಚಾರಣೆಗೆ ಆಗಮಿಸಿದ್ದ ಮುಡಾ ಮಾಜಿ ದಿನೇಶ್ ಕುಮಾರ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸೆಪ್ಟೆಂಬರ್ 16ರಂದು ಬೆಂಗಳೂರಿನ ಶಾಂತಿನಗರದ ಇಡಿ ಕಚೇರಿಗೆ ದಿನೇಶ್ ಕುಮಾರ್ ಆಗಮಿಸಿದ್ದರು. ವಿಚಾರಣೆಯ ಬಳಿಕ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ದಿನೇಶ್ ಕುಮಾರ್ ವಿರುದ್ಧ ತನಿಖೆ ನಡೆಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಮುಡಾ ಮಾಜಿ ಅಧ್ಯಕ್ಷ ಹೆಚ್.ವಿ. ರಾಜೀವ್ ಮತ್ತು ದಿನೇಶ್ ಕುಮಾರ್ ವಿರುದ್ಧ ಲೋಕಾಯುಕ್ತ ತನಿಖೆಗೆ ಅನುಮತಿ ನೀಡುವಂತೆ ಕೋರಿ ಲೋಕಾಯುಕ್ತ ಪೊಲೀಸರು ಪ್ರಾಸಿಕ್ಯೂಷನ್ ಅನುಮತಿ ಕೋರಿದ್ದರು. ಆದರೆ ದಿನೇಶ್ ಕುಮಾರ್ ವಿರುದ್ಧ ಮಾತ್ರ ತನಿಖೆ ನಡೆಸಲು ಸರ್ಕಾರ ಅನುಮತಿ ನೀಡಿದೆ. ಇದರ ಬೆನ್ನಲ್ಲೇ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ನಕಲಿ ದಾಖಲೆ ಸೃಷ್ಟಿಸಿ ಆ ದಾಖಲೆಗಳ ಮೂಲಕ ನಿವೇಶನ ಮರುಹಂಚಿಕೆ ಮಾಡಿ ಲಾಭ ಮಾಡಿದ್ದಾರೆ. ಮುಡಾದಲ್ಲಿ 50:50 ಅನುಪಾತದಲ್ಲಿ ನಿವೇಶನ ಹಂಚಿಕೆಯಲ್ಲಿ ಆಕ್ರಮ ಎಸಾಗಿದ್ದಾರೆ ಎಂದು ದಿನೇಶ್ ವಿರುದ್ಧ ಆರೋಪವಿದೆ.
ಈ ಹಿನ್ನೆಲೆಯಲ್ಲಿ ಅವರಿಗೆ ಯಾವುದೇ ಸ್ಥಳ ತೋರಿಸದೆ ವರ್ಗಾವಣೆ ಮಾಡಲಾಗಿದ್ದು, ನಂತರ ಹಾವೇರಿ ವಿವಿ ಕುಲಸಚಿವ ಹುದ್ದೆ ನೀಡಲಾಗಿತ್ತು. ಇದು ಚರ್ಚೆ, ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಆದೇಶವನ್ನು ರದ್ದು ಮಾಡಲಾಗಿತ್ತು. ಇಡಿ ಅಧಿಕಾರಿಗಳು ದಿನೇಶ್ ಕುಮಾರ್ ಅವರಿಗೆ ಸೇರಿದ ಆಸ್ತಿ ಜಪ್ತಿ ಮಾಡಿದ್ದಾರೆ.