ವಿಜಯನಗರ: ಕೊಪ್ಪಳದ ಬಲ್ಡೋಟ ಉಕ್ಕು ಕಾರ್ಖಾನೆಯ ಬಗ್ಗೆ ವಿಸ್ತೃತ ವರದಿ ನೀಡುವಂತೆ ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದ್ದು, ವರದಿ ಪರಿಶೀಲಿಸಿದ ನಂತರ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಿಜಯನಗರದ ಹೊಸಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಕೊಪ್ಪಳದ ಬಲ್ಡೋಟ ಉಕ್ಕು ಕಾರ್ಖಾನೆಯ ಕೆಲಸವನ್ನು ಸ್ಥಗಿತಗೊಳಿಸುವಂತೆ ಮುಖ್ಯಮಂತ್ರಿಗಳ ಆದೇಶ ಹೊರತಾಗಿಯೂ, ಕೆಲಸ ಮುಂದುವರೆದಿರುವ ಬಗ್ಗೆ ಪ್ರತಿಕ್ರಿಯಿಸಿ ಡಿಸಿ ವರದಿ ಪರಿಶೀಲಿಸಿ ತೀರ್ಮಾನಿಸಲಾಗುವುದು ಎಂದರು.
ಇನ್ನು ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ತಲುಪುತ್ತಿಲ್ಲ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿ, ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಯಾವುದೇ ರೀತಿಯ ಹಣದ ಕೊರತೆಯಿಲ್ಲ. ಕಳೆದ ವರ್ಷದಂತೆ ಈ ಸಾಲಿನ ಬಜೆಟ್ ನಲ್ಲಿಯೂ ಗ್ಯಾರಂಟಿಗಳಿಗೆ ಹಣ ಮೀಸಲಿರಿಸಲಾಗಿದೆ ಎಂದರು.
ಸರ್ಕಾರ ಎರಡು ವರ್ಷ ಪೂರೈಸಿದ ಸಂದರ್ಭದಲ್ಲಿ ಸಾಧನಾ ಸಮಾವೇಶವನ್ನು ವಿಜಯನಗರದ ಹೊಸಪೇಟೆಯಲ್ಲಿ ಮೇ 20 ರಂದು ಆಯೋಜಿಸಿದ್ದು, ಕಾರ್ಯಕ್ರಮಕ್ಕೆ ಸುಮಾರು ಮೂರು ಲಕ್ಷ ಜನ ಆಗಮಿಸುವ ಸಾಧ್ಯತೆಯಿದೆ ಎಂದರು.