ಬಿಜೆಪಿ ನಾಯಕರೇ, ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಸಾರ್ವಜನಿಕ ಚರ್ಚೆಗೆ ನಾನು ಸದಾ ಸಿದ್ಧ. ಸ್ಥಳ ಮತ್ತು ಸಮಯವನ್ನು ಬಿಜೆಪಿ ನಾಯಕರೇ ನಿಗದಿಗೊಳಿಸಿ ನನ್ನನ್ನು ಕರೆಯಲಿ. ಸುಖಾ ಸುಮ್ಮನೆ ಸುಳ್ಳು-ಪೊಳ್ಳು ಬರ್ಕೊಂಡು, ಪೋಟೋಶಾಪ್ ಮಾಡಿಕೊಂಡು ನಿಮ್ಮ ಮಾನ ನೀವೇ ಮಾರಿಕೊಳ್ಳಬೇಡಿ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಟ್ವೀಟ್ ಮಾಡಿದ್ದಾರೆ.
ರಾಜಕೀಯವಾಗಿ ನನ್ನನ್ನಾಗಲಿ, ಕಾಂಗ್ರೆಸ್ ಪಕ್ಷವನ್ನಾಗಲಿ ಎದುರಿಸುವ ಧೈರ್ಯ ರಾಜ್ಯದ ಬಿಜೆಪಿ ನಾಯಕರಿಗಿಲ್ಲ. ಇದಕ್ಕಾಗಿ ನನ್ನ ವಿರುದ್ಧದ ಹೋರಾಟವನ್ನೂ ದುಡ್ಡಿಗಾಗಿ ಮಾರಿಕೊಂಡ ಬಾಡಿಗೆ ಬರಹಗಾರರಿಗೆ ಔಟ್ ಸೋರ್ಸ್ ಮಾಡಿದ್ದಾರೆ. ಶೇಮ್ ಆನ್ ಯು ಎಂದು ಹೇಳಿದ್ದಾರೆ.
ಚರ್ಚೆ-ಸಂವಾದಗಳ ರಾಜಕೀಯದಲ್ಲಿ ನನಗೆ ನಂಬಿಕೆ ಇದೆ. ಇದಕ್ಕಾಗಿಯೇ ಇರುವುದು ವಿಧಾನಮಂಡಲ. ಅಲ್ಲಿ ಚರ್ಚೆ ನಡೆಸುವ ಧೈರ್ಯ ಇಲ್ಲದೆ ಅಧಿವೇಶನವನ್ನೇ ಮೊಟಕುಗೊಳಿಸುತ್ತೀರಿ. ಹೊರಗೆ ಬೀದಿಯಲ್ಲಿ ಬಾಡಿಗೆ ಬರಹಗಾರರನ್ನು ಕಟ್ಟಿಕೊಂಡು ನನ್ನ ಬಗ್ಗೆ ಕಟ್ಟು ಕತೆ ಹೆಣೆಯುತ್ತೀರಿ. ಇದೇನಾ ನಿಮ್ಮ ಸಂಸ್ಕೃತಿ ಎಂದು ಪ್ರಶ್ನಿಸಿದ್ದಾರೆ.
ನಮ್ಮ ಸರ್ಕಾರದ ವೈಫಲ್ಯಗಳ ಬಗ್ಗೆ ನೂರು ಪುಸ್ತಕಗಳನ್ನು ಪ್ರಕಟಿಸಿ, I don’t care. ಅದನ್ನು ತಡೆಯಲೂ ಹೋಗುವುದಿಲ್ಲ. ಆದರೆ ನನ್ನ ಪೋಟೊವನ್ನು ವಿರೂಪಗೊಳಿಸಿ, ನಿಮ್ಮ ವಿಕೃತ ಕನಸುಗಳಿಗಾಗಿ ನನ್ನ ಸುಂದರ ಕನಸುಗಳನ್ನು ತಿರುಚಿ ಮಾರಾಟ ಮಾಡಲು ಬಿಡುವುದಿಲ್ಲ ಎಂದಿದ್ದಾರೆ.
ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗಲೇ, ಹಸಿವು, ಅನಕ್ಷರತೆ, ಅನಾರೋಗ್ಯ, ನಿರುದ್ಯೋಗ ಮುಕ್ತ ಕರ್ನಾಟಕ ನಿರ್ಮಾಣದ ಕನಸು ಕಂಡಿದ್ದೆ. ಪಕ್ಷದ ಪ್ರಣಾಳಿಕೆಯಲ್ಲಿನ 158 ಭರವಸೆಗಳನ್ನು ಈಡೇರಿಸಿ ಆ ಕನಸುಗಳನ್ನು ನನಸಾಗಿಸಿದ್ದೆ. ಅನುಮಾನ ಇದ್ದವರು ಚರ್ಚೆಗೆ ಬನ್ನಿ ಎಂದು ಹೇಳಿದ್ದಾರೆ.
ಸುಳ್ಳು, ಅನ್ಯಾಯ ಮತ್ತು ಅಧರ್ಮದ ನೆಲೆಗಟ್ಟಿನ ಮೇಲೆ ನಿಂತಿರುವ ಬಿಜೆಪಿ ನಾಯಕರಿಗೆ ಸತ್ಯ, ನ್ಯಾಯ ಮತ್ತು ನಿಜವಾದ ಧರ್ಮದ ಹಾದಿಯಲ್ಲಿ ನಡೆಯುವವರನ್ನು ಕಂಡರೆ ಭಯ. ಈ ಭಯದಿಂದಲೇ ರಾತ್ರಿ-ಹಗಲು ನನ್ನ ವಿರುದ್ಧ ಸುಳ್ಳು ಆರೋಪಗಳ ಸುರಿಮಳೆ ಸುರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
https://twitter.com/siddaramaiah/status/1612807388981231619
https://twitter.com/siddaramaiah/status/1612807563405582336
https://twitter.com/siddaramaiah/status/1612807674705633284
https://twitter.com/siddaramaiah/status/1612808337216901124
https://twitter.com/siddaramaiah/status/1612808523993477121
https://twitter.com/siddaramaiah/status/1612808681334407168