ಬೆಂಗಳೂರು: ನಮ್ಮ ದೇಶದಲ್ಲಿ ಭಯೋತ್ಪಾದನೆಯನ್ನು ಸಂಪೂರ್ಣ ಮಟ್ಟ ಹಾಕಬೇಕು. ಉಗ್ರರ ಚಟುವಟಿಕೆ ಎಂಬುದೇ ಇರಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ಜೊತೆ ನಾವಿದ್ದೇವೆ. ಉಗ್ರರನ್ನು, ಉಗ್ರ ಚಟುವಟಿಕೆಯನ್ನು ಸಂಪೂರ್ಣ ಮಟ್ಟಹಾಕಬೇಕು ಎಂದು ಹೇಳಿದರು.
ಪಹಲ್ಗಾಮ್ ನಲ್ಲಿ ಉಗ್ರರ ದಾಳಿಗೆ ಬಲಿಯಾಗಿರುವ ಕನ್ನಡಿಗ ಭರತ್ ಭೂಷಣ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ, ಅಮಾನವೀಯ ಕೃತ್ಯವಿದು, ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ಭರತ್ ಭೂಷಣ್ ಅವರನ್ನು ಹಾಡಹಗಲೇ ಹೆಂಡತಿ, ಮಗನ ಕಣ್ಮುಂದೆಯೇ ಶೂಟ್ ಮಾಡಿ ಹತ್ಯೆ ಮಾಡಿದ್ದಾರೆ. ಇಂತಹ ಘಟನೆ ಮತ್ತೆ ಮರುಕಳಿಸಬಾರದು. ಕೇಂದ್ರ ಸರ್ಕಾರ ನಮ್ಮ ದೇಶದಲ್ಲಿ ಉಗ್ರರು ಇರದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಉಗ್ರರ ದಾಳಿಯಲ್ಲಿ ಕನ್ನಡಿಗರಾದ ಭರತ್ ಭೂಷಣ, ಮಂಜುನಾಥ್ ರಾವ್ ಮೃತಪಟ್ಟಿದ್ದಾರೆ. ಅವರ ಕುಟುಂಬಗಳಿಗೆ ಸರ್ಕಾರದಿಂದ 10 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಹೇಳಿದರು. ಇಬ್ಬರ ಅಂತ್ಯಕ್ರಿಯೆಗೂ ಸರ್ಕಾರದಿಂದ ವ್ಯವಸ್ಥೆ ಮಾಡಲಗುವುದು ಎಂದು ತಿಳಿಸಿದರು.