ಪ್ರತಿಭಟನಾಕಾರರು ಕಲ್ಲು ತೂರದಿದ್ದರೆ ಪೊಲೀಸರಿಗೆ ಗಾಯ ಹೇಗಾಯಿತು? ಪೊಲೀಸರೇ ಕಲ್ಲು ಎಸೆದುಕೊಂಡಿದ್ದಾರೆಯೇ ? ಸಿಎಂ ಪ್ರಶ್ನೆ

ವಿಜಯಪುರ: ಪಂಚಮಸಾಲಿ ಸಮುದಾಯದ ಪ್ರತಿಭಟನೆ ವೇಳೆ ಕಲ್ಲು ತೂರಾಟ, ಲಾಠಿ ಚಾರ್ಜ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಕೈಗೆ ತೆಗೆದುಕೊಂಡು ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿಕೊಂಡು ಕೂರಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಪಂಚಮಸಾಲಿ ಸಮುದಾಯದವರು ಪ್ರವರ್ಗ 2ಎ ಅಡಿಯಲ್ಲಿ ಮೀಸಲಾತಿ ಕಲ್ಪಿಸುವಂತೆ ಕೇಳುವುದಕ್ಕೆ, ಚಳವಳಿ ಮಾಡುವುದಕ್ಕೆ ನಮ್ಮ ತಕರಾರಿಲ್ಲ. ಆದರೆ ಶಾಂತಿಯುತವಾಗಿ ಪ್ರತಿಭಟನೆಯಾಗಬೇಕು. ಕಾನೂನನ್ನು ಯಾರೂ ಕೈಗೆ ತೆಗೆದುಕೊಳ್ಳಬಾರದು ಎಂದು ಮನವಿ ಮಾಡಿದರು.

ಕಾನೂನಿನ ಮುಂದೆ ಎಲ್ಲರೂ ಸಮಾನರು. ಸ್ವಾಮೀಜಿಯಾಗಲಿ, ಯಾರಾದರೂ ಆಗಿರಲಿ.‌ ಎಲ್ಲರಿಗೂ ಕಾನೂನು ಒಂದೇ. ನನಗೂ, ಸ್ವಾಮೀಜಿಗೂ ಎಲ್ಲರಿಗೂ ಒಂದೇ. ಸಂವಿಧಾನದ 14 ನೇ ವಿಧಿಯ ಪ್ರಕಾರ ಕಾನೂನಿನ ಮುಂದೆ ಎಲ್ಲರೂ ಸಮಾನರು ಹಾಗೂ ಕಾನೂನಿನ ಸಮಾನ ರಕ್ಷಣೆಯನ್ನು ಖಾತ್ರಿಪಡಿಸುತ್ತದೆ ಎಂದರು.

ಪ್ರವರ್ಗ 2ಎ ಅಡಿಯಲ್ಲಿರುವ ಸಮುದಾಯಗಳು ಪಂಚಮಸಾಲಿ ಸಮುದಾಯವನ್ನು 2 ಎ ಗೆ ಸೇರಿಸಲು ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಅವರ ಅಭಿಪ್ರಾಯ ಹೇಳಲು ಅವರಿಗೆ ಸ್ವಾತಂತ್ರ್ಯವಿದೆ. ಸ್ವಾಮೀಜಿಗಳಿಗೂ ಅವರ ಅಭಿಪ್ರಾಯ ತಿಳಿಸಲು ಸ್ವಾತಂತ್ರ್ಯವಿದೆ. ಅಂತಿಮವಾಗಿ ಸಂವಿಧಾನ ಪ್ರಕಾರ ನಡೆದುಕೊಳ್ಳುತ್ತೇವೆ ಎಂದರು.

ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವ ವೇಳೆ ಪಂಚಮಸಾಲಿ ಸಮುದಾಯದ ಜನರ ಮೇಲೆ ಪೊಲೀಸ್ ಕಲ್ಲು ಹೊಡೆದಿದ್ದಾರೆ ಎಂಬ ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಅವರು ಕಲ್ಲು ಹೊಡೆದಿರುವುದು, ಬ್ಯಾರಿಕೇಡ್ ತಳ್ಳಿ ಒಳಗೆ ನುಗ್ಗುವುದರ ಫೋಟೋಗಳನ್ನು ತೋರಿಸುತ್ತೇವೆ. ಸ್ವಾಮೀಜಿಗಳು ರಸ್ತೆಯಲ್ಲಿ ಏಕೆ ಕುಳಿತುಕೊಂಡಿದ್ದಾರೆ? ಪ್ರತಿಭಟನಾಕಾರರು ಕಲ್ಲು ತೂರದಿದ್ದರೆ 20ಕ್ಕೂ ಹೆಚ್ಚು ಪೊಲೀಸರಿಗೆ ಗಾಯ ಹೇಗಾಯಿತು. ಪೊಲೀಸರೇ ಕಲ್ಲು ಎಸೆದುಕೊಂಡಿದ್ದಾರೆಯೇ ? ಎಂದು ಪ್ರಶ್ನಿಸಿದರು. ನಾನು ಹೇಳಿರುವುದಕ್ಕೆ ಸಾಕ್ಷಿಯಿದೆ ಎಂದರು.

ಮೀಸಲಾತಿ ಮುಂದೇನು ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಪಂಚಮಸಾಲಿ ಸಮಾಜದವರು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮುಂದೆ ಹೋಗಬೇಕು. ಬಿಜೆಪಿ ಕಾಲದಲ್ಲಿ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗಡೆಯವರ ವರದಿಯಲ್ಲಿ ಈಗಿರುವಂತೆಯೇ ಪ್ರವರ್ಗ 2ಎ 2ಬಿ ಇರಬೇಕು. ಇದಕ್ಕೆ ಹೊಸ ಸೇರ್ಪಡೆಯಾಗಬಾರದು 2ಬಿ ಯಲ್ಲಿರುವ 4% ಮೀಸಲಾತಿಯನ್ನು ರದ್ದು ಮಾಡಬಾರದು ಎಂದು ಹೇಳಿದ್ದಾರೆ ಎಂದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read