ಮೈಸೂರು: ರೋಗಿಗಳಿಗೆ ಅವಧಿ ಮುಗಿದ ಪದಾರ್ಥಗಳಿಂದ ಆಹಾರ ತಯಾರಿಸುತ್ತಿದ್ದ ಹಿನ್ನೆಲೆಯಲ್ಲಿ ಮೈಸೂರಿನ ಚೆಲುವಾಂಬ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಅಮಾನತು ಮಾಡಲಾಗಿದೆ. ಆಸ್ಪತ್ರೆಯ ಸಿಬ್ಬಂದಿ ಲೀಲಾವತಿ ಮತ್ತು ಲಾರೆನ್ಸ್ ಅವರನ್ನು ಅಮಾನತು ಮಾಡಲಾಗಿದೆ.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಹೆಚ್. ಕೃಷ್ಣ ಹೇಳಿಕೆ ನೀಡಿದ್ದಾರೆ. ಚೆಲುವಾಂಬ ಆಸ್ಪತ್ರೆಗೆ ಭೇಟಿ ನೀಡಿದ್ದ ಡಾ.ಹೆಚ್. ಕೃಷ್ಣ ನೇತೃತ್ವದ ನಿಯೋಗ ಪರಿಶೀಲನೆ ನಡೆಸಿದ್ದು, ಹುಳ ಇರುವ ಪದಾರ್ಥದಿಂದ ರೋಗಿಗಳಿಗೆ ಆಹಾರ ತಯಾರಿಸಿ ಕೊಟ್ಟಿರುವುದು ಪತ್ತೆಯಾಗಿತ್ತು. ಅವಧಿ ಮುಗಿದ ರವೆ, ಅವಲಕ್ಕಿ, ಕಡ್ಲೆಬೇಳೆ ಸೇರಿದಂತೆ ಇತರೆ ವಸ್ತುಗಳನ್ನು ಬಳಕೆ ಮಾಡಿರುವುದು ಗೊತ್ತಾಗಿದೆ. ರೋಗಿಗಳಿಗೆ ಕೆಲವೇ ಕೆಲವು ಐಟಂಗಳನ್ನು ಮಾತ್ರ ಸಿಬ್ಬಂದಿ ನೀಡುತ್ತಿದ್ದರು.
ಅವಧಿ ಮುಗಿದ ಆಹಾರ ಪದಾರ್ಥಗಳ ಸ್ಯಾಂಪಲ್ ಅನ್ನು ಸಂಗ್ರಹಿಸಲಾಗಿದೆ. ಲ್ಯಾಬ್ ನಿಂದ ವರದಿ ಬಂದ ನಂತರ ಮತ್ತಷ್ಟು ಸಿಬ್ಬಂದಿ ವಿರುದ್ಧ ಕೇಸು ದಾಖಲಿಸಲಾಗುವುದು. ಆಸ್ಪತ್ರೆಯ ಆವರಣ ಶುಚಿಯಾಗಿಲ್ಲ, ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕಿದೆ.
ಈ ನಡುವೆ ಕಳಪೆ ವಸ್ತುಗಳಿಂದ ಹಾಗೂ ಅವಧಿ ಮುಗಿದ ಪದಾರ್ಥಗಳಿಂದ ಆಹಾರ ತಯಾರಿಸಿ ರೋಗಿಗಳಿಗೆ ನೀಡುತ್ತಿದ್ದಾರೆ ಎಂದು ಡಾ.ಹೆಚ್. ಕೃಷ್ಣ ಹೇಳಿದ್ದಾರೆ.
ಐದು ಜಿಲ್ಲೆಗಳ ರೋಗಿಗಳು ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ಬರುತ್ತಾರೆ. ಹೀಗಿರುವಾಗ ಆಸ್ಪತ್ರೆಯ ಸ್ವಚ್ಛತೆ ಕಾಪಾಡುವಲ್ಲಿ ಆಡಳಿತ ಮಂಡಳಿ ವಿಫಲವಾಗಿದೆ. ಸಾಂಕೇತಿಕವಾಗಿ ಇಬ್ಬರನ್ನು ಮಾತ್ರ ಅಮಾನತು ಮಾಡಲಾಗಿದೆ. ಸಿಬ್ಬಂದಿ ಕೊರತೆ ಇರುವುದರಿಂದ ಎಲ್ಲರ ವಿರುದ್ಧ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.