ಬಾಗಲಕೋಟೆ: ಮದ್ಯ ಸೇವನೆಗೆ ಹಣ ಕೊಡದ ಕಾರಣಕ್ಕೆ ಹೆತ್ತ ತಾಯಿಯನ್ನೇ ಕೈಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಕತ್ತು ಕೊಯ್ದು ಕೊಲೆ ಮಾಡಿದ ಘಟನೆ ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದಲ್ಲಿ ನಡೆದಿದೆ.
28 ವರ್ಷದ ವೆಂಕಟೇಶ್ ಗಿರಿಸಾಗರ ಎಂಬಾತ ತನ್ನ 58 ವರ್ಷದ ತಾಯಿ ಶಾವಕ್ಕ ಗಿರಿಸಾಗರ ಅವರ ಕೈಕಾಲು ಕಟ್ಟಿ ಬಾಯಲ್ಲಿ ಬಟ್ಟೆ ತುರುಕಿ, ಕುತ್ತಿಗೆ ಕೊಯ್ದು ಕೊಲೆ ಮಾಡಿ ಬಳಿಕ ಪರಾರಿಯಾಗಿದ್ದಾನೆ. ಶಾವಕ್ಕ ಮನೆಯಲ್ಲಿ ನರಳಾಡಿ ಪ್ರಾಣ ಬಿಟ್ಟಿದ್ದಾರೆ.
ಶಾವಕ್ಕ ಅವರ ಪತಿ ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಮಗಳನ್ನು ಮದುವೆ ಮಾಡಿ ಬೇರೆ ಊರಿಗೆ ಕೊಡಲಾಗಿತ್ತು. ಬಾಡಿಗೆ ಮನೆಯಲ್ಲಿ ವೆಂಕಟೇಶ್ ಮತ್ತು ಶಾವಕ್ಕ ವಾಸವಾಗಿದ್ದರು. ಯಾವುದೇ ಕೆಲಸ ಮಾಡದೆ ಕುಡಿತದ ಚಟ ರೂಢಿಸಿಕೊಂಡಿದ್ದ ವೆಂಕಟೇಶ್ ತಾಯಿ ಕೂಲಿ ಮಾಡಿದ ಹಣವನ್ನು ಪಡೆದು ದಿನ ಕುಡಿದು ಬಂದು ಜಗಳವಾಡುತ್ತಿದ್ದ.
ಗುರುವಾರ ಕೂಡ ಹಣಕ್ಕಾಗಿ ಪೀಡಿಸಿದ್ದು, ಹಣಕೊಡಲು ನಿರಾಕರಿಸಿದಾಗ ಕೈಕಾಲು ಕಟ್ಟಿ ಬಾಯಲ್ಲಿ ಬಟ್ಟೆ ತುರುಕಿ, ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಸಂಜೆಯಾದರೂ ಶಾವಕ್ಕ ಕಾಣಿಸದಿದ್ದಾಗ ಅಕ್ಕಪಕ್ಕದವರು ಇಣುಕಿ ನೋಡಿದ್ದಾರೆ. ರಕ್ತದ ಮಡುವಿನಲ್ಲಿ ಶವವಾಗಿ ಬಿದ್ದಿರುವುದು ಗೊತ್ತಾಗಿದೆ. ಕೂಡಲೇ ಕಲಾದಗಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ತಾಯಿಯನ್ನು ಕೊಂದು ಗದ್ದನಕೇರಿ ಕ್ರಾಸ್ ನ ಬಾರ್ ನಲ್ಲಿ ಕುಡಿಯುತ್ತ ಕುಳಿತಿದ್ದ ವೆಂಕಟೇಶನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.