ಮಹಾರಾಷ್ಟ್ರದಲ್ಲಿ 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪದ ಮೇಲೆ 19 ವರ್ಷದ ಯುವಕನನ್ನು ಬಂಧಿಸಲಾಗಿದೆ. ಮುಂಬ್ರಾದ ವಸತಿ ಕಟ್ಟಡದ ಬಳಿ ಈ ಘಟನೆ ನಡೆದಿದೆ.
ಆರೋಪಿಯನ್ನು ಆಸಿಫ್ ಮನ್ಸೂರಿ ಎಂದು ಗುರುತಿಸಲಾಗಿದ್ದು, ಆತ ಬಾಲಕಿಗೆ ಕೆಲವು ತಿನಿಸುಗಳನ್ನು ನೀಡಿ ವಸತಿ ಸೊಸೈಟಿ ಬಳಿಯ ಏಕಾಂತ ಸ್ಥಳಕ್ಕೆ ಕರೆದೊಯ್ದಿದ್ದಾನೆ.
ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿ, ಆಕೆಯ ದೇಹವನ್ನು ಬಿಟ್ಟು ಹೋಗಿದ್ದಾನೆ ಎಂದು ಆರೋಪಿಸಲಾಗಿದೆ.
ಬಾಲಕಿಯ ಶವ ಸ್ಥಳದಲ್ಲಿ ಪತ್ತೆಯಾದ ನಂತರ ಈ ಘಟನೆ ಬೆಳಕಿಗೆ ಬಂದಿದೆ.ಆರೋಪಿಯನ್ನು ಬಂಧಿಸಲಾಗಿದ್ದರೂ, ಸ್ಥಳೀಯರು ಹತ್ತಿರದ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ ನಡೆಸಿ, ಆತನನ್ನು ಸಾರ್ವಜನಿಕರಿಗೆ ಹಸ್ತಾಂತರಿಸುವಂತೆ ಒತ್ತಾಯಿಸಿದರು. ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಬಾಲಕಿಯ ದೇಹದ ವೈದ್ಯಕೀಯ ಪರೀಕ್ಷೆಯು ಲೈಂಗಿಕ ದೌರ್ಜನ್ಯವನ್ನು ಸೂಚಿಸಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದ್ದು, ಬಾಲಕಿಯ ಸಾವಿಗೆ ಕಾರಣವನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದರು.