ಬೆಂಗಳೂರು: ಬೀದಿ ನಾಯಿ ಮೇಲೆ ವಿಕೃತಕಾಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿದ್ದು, ಬೆಂಗಳೂರಿನ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕನಾಯಕನಹಳ್ಳಿಯ ಅಪಾರ್ಟ್ಮೆಂಟ್ ವೊಂದರ ನಿವಾಸಿಯಾಗಿರುವ ದಿತಿಪ್ರಿಯಾ ಈ ಕುರಿತಾಗಿ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಪ್ರಾಣಿಗಳ ಮೇಲಿನ ಹಿಂಸೆ ನಿಯಂತ್ರಣ ಕಾಯ್ದೆ ಮತ್ತು ಬಿಎನ್ಎಸ್ ಸೆಕ್ಷನ್ 325ರ ಅಡಿ ಎಫ್ಐಆರ್ ದಾಖಲಿಸಿ ಪೊಲೀಸರು ತನಿಖೆ ನಡೆಸಿದ್ದಾರೆ.
ಅಪರಿಚಿತರು ಬೀದಿ ನಾಯಿಯೊಂದರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗುತ್ತಿರುವ ದಿತಿಪ್ರಿಯಾ ಅವರಿಗೆ ಸ್ನೇಹಿತೆಯೊಬ್ಬರು ಅಕ್ಟೋಬರ್ 13 ರಂದು ತಿಳಿಸಿದ್ದಾರೆ. ಮಿಲಿ ಎನ್ನುವ ನಾಯಿಗೆ ದಿತಿಪ್ರಿಯಾ ಪ್ರತಿದಿನ ಊಟ ಹಾಕುತ್ತಿದ್ದರು.
ಅಕ್ಟೋಬರ್ 16ರಂದು ನಾಯಿ ಮಿಲಿಯನ್ನು ನೋಡಿದಾಗ ಅದರ ಖಾಸಗಿ ಅಂಗ ಊದಿಕೊಂಡಿರುವುದು ಕಂಡುಬಂದಿದೆ. ಅದು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಬೀದಿ ನಾಯಿ ಇರಬಹುದು ಎಂದು ಶಂಕಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಬೆಳ್ಳಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಘಟನೆ ನಡೆದ ಸುತ್ತಲಿನ 25 ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ಬೀದಿ ನಾಯಿ ಮಿಲಿ ಪತ್ತೆ ಹಚ್ಚಿದ್ದಾರೆ. ಪಶು ಆಸ್ಪತ್ರೆಗೆ ಕೊಂಡೊಯ್ದು ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ. ವೆಜೈನಲ್ ಸ್ವ್ಯಾಬ್ ಸಂಗ್ರಹಿಸಿ ಎಫ್ಎಸ್ಎಲ್ ಗೆ ಕಳಿಸಿದ್ದು, ವರದಿ ನಂತರ ಅತ್ಯಾಚಾರದ ಬಗ್ಗೆ ಖಚಿತ ಮಾಹಿತಿ ಗೊತ್ತಾಗಲಿದೆ.
