ಮುಂಬೈ: ಮಹಾರಾಷ್ಟ್ರದ ಲೋನಾವಾಲದಲ್ಲಿ ಸಾಮೂಹಿಕ ಅತ್ಯಾಚಾರದ ಪ್ರಕರಣ ಬೆಳಕಿಗೆ ಬಂದಿದೆ. 23 ವರ್ಷದ ಸ್ಥಳೀಯ ಮಹಿಳೆಯನ್ನು ಮೂವರು ಪುರುಷರು ಅಪಹರಿಸಿ ಚಲಿಸುವ ಕಾರ್ ನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
ತುಂಗೌಲಿ ಪ್ರದೇಶದಲ್ಲಿ ಮಹಿಳೆ ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದಾಗ ಅಪಹರಿಸಿ ಕೃತ್ಯವೆಸಗಿದ್ದಾರೆ. ದುಷ್ಕರ್ಮಿಗಳು ಮಹಿಳೆ ಮೇಲೆ ಪದೇ ಪದೇ ಹಲ್ಲೆ ಮಾಡಿದ್ದಾರೆ.
ಲೋನಾವಾಲ ನಗರ ಪೊಲೀಸರು ದಾಖಲಿಸಿದ ಎಫ್‌ಐಆರ್ ಪ್ರಕಾರ, ಮಹಿಳೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಾಗ 25 ರಿಂದ 35 ವರ್ಷ ವಯಸ್ಸಿನ ಮೂವರು ಪುರುಷರು ಬಲವಂತವಾಗಿ ಕಾರ್ ಗೆ ಎಳೆದೊಯ್ದರು. ನಂತರ ಅವರು ಪ್ರತ್ಯೇಕ ಸ್ಥಳಗಳಿಗೆ ಹೋಗಿ ಸರದಿಯಂತೆ ಅತ್ಯಾಚಾರ ಮಾಡಿ, ದಾರಿಯುದ್ದಕ್ಕೂ ಹಲವು ಸ್ಥಳಗಳಲ್ಲಿ ಕಾರ್ ನಿಲ್ಲಿಸಿದರು. ಹಲ್ಲೆ ಮಾಡಿ ನಂತರ ನಿರ್ಜನ ರಸ್ತೆಯಲ್ಲಿ ಮಹಿಳೆ ಬಿಟ್ಟು ಹೋಗಿದ್ದಾರೆ.
ಆಘಾತಕ್ಕೊಳಗಾದ ಮಹಿಳೆ ಸುರಕ್ಷಿತ ಸ್ಥಳಕ್ಕೆ ತಲುಪಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಪೊಲೀಸರು ತ್ವರಿತ ಕ್ರಮ ಕೈಗೊಂಡು ಒಬ್ಬನನ್ನು ಬಂಧಿಸಿದ್ದಾರೆ. ಇಬ್ಬರು ಪರಾರಿಯಾಗಿದ್ದಾರೆ.
ಲೋನಾವಾಲ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಉಳಿದ ಇಬ್ಬರು ಶಂಕಿತರಿಗಾಗಿ ಪೊಲೀಸ್ ತಂಡಗಳು ಸಕ್ರಿಯವಾಗಿ ಹುಡುಕಾಟ ನಡೆಸುತ್ತಿರುವುದಾಗಿ ಲೋನಾವಾಲ ನಗರ ಪೊಲೀಸ್ ಇನ್ಸ್‌ಪೆಕ್ಟರ್ ರಾಜೇಶ್ ರಾಮಘರೆ ತಿಳಿಸಿದ್ದಾರೆ.