ತಿರುಪತಿ: ತಿರುಪತಿ ತಿರುಮಲದ ಶ್ರೀ ವೆಂಕಟೇಶ್ವರ ದೇವಾಲಯದ ಲಡ್ಡು ಪ್ರಸಾದಕ್ಕೆ ಕಲಬೆರಕೆ ತುಪ್ಪ ಬಳಕೆ ಮಾಡಿರುವ ವಿವಾದದ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.
ಐದು ವರ್ಷದಲ್ಲಿ ತಿರುಪತಿಯಲ್ಲಿ 20 ಕೋಟಿ ಕಲಬೆರಕೆ ಲಡ್ಡು ಹಂಚಿಕೆ ಮಾಡಲಾಗಿದೆ. ಕಲಬೆರಕೆ ತುಪ್ಪ ಬಳಸಿದ ಲಡ್ಡು ವಿತರಣೆ ಬಗ್ಗೆ ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದೆ. 2019 ರಿಂದ 2024ರ ಅವಧಿಯಲ್ಲಿ ದೇವಾಲಯಕ್ಕೆ ಭೇಟಿ ನೀಡಿದ 11 ಕೋಟಿ ಭಕ್ತರಿಗೆ 48.76 ಕೋಟಿ ಲಡ್ಡು ವಿತರಿಸಲಾಗಿದ್ದು, ಇದರಲ್ಲಿ 20 ಕೋಟಿ ಲಡ್ಡುಗಳಲ್ಲಿ ಕಲಬೆರಕೆ ತುಪ್ಪ ಬಳಕೆಯಾಗಿದೆ ಎಂದು ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಮಾಹಿತಿ ನೀಡಿದ್ದಾರೆ.
ಐದು ವರ್ಷದಲ್ಲಿ ದೇವಾಲಯಕ್ಕೆ ದೈನಂದಿನ ಭಕ್ತರ ಭೇಟಿ, ತುಪ್ಪ ಖರೀದಿ, ಲಡ್ಡು ಉತ್ಪಾದನೆ, ಮಾರಾಟ ವಿಷಯಗಳನ್ನು ಗಣನೆಗೆ ತೆಗೆದುಕೊಂಡು ಹಾಕಿದ ಲೆಕ್ಕಾಚಾರದಲ್ಲಿ ನಕಲಿ ತುಪ್ಪದಿಂದ ತಯಾರಿಸಿದ ಲಡ್ಡುಗಳು ಎಷ್ಟು ಎನ್ನುವುದು ಪತ್ತೆಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಯಾರಿಗೆ ಶುದ್ಧ ತುಪ್ಪದ ಲಡ್ಡು? ಯಾರಿಗೆ ನಕಲಿ ತಪ್ಪದ ಲಡ್ಡು ವಿತರಿಸಲಾಗಿದೆ ಎಂದು ತಿಳಿಯಲು ಸಾಧ್ಯವಿಲ್ಲ. ಆದರೆ, ಟಿಟಿಡಿ ಮಾರುಕಟ್ಟೆ ದಾಖಲೆಗಳ ಪ್ರಕಾರ ಈ ಅವಧಿಯಲ್ಲಿ ಅನೇಕ ಡೈರಿಗಳಿಂದ ಒಟ್ಟು 534.7 ಕೋಟಿ ರೂಪಾಯಿ ಮೌಲ್ಯದ 1.61 ಕೋಟಿ ಕೆಜಿ ತುಪ್ಪ ಖರೀದಿಸಲಾಗಿದೆ. ಇದರಲ್ಲಿ ಉತ್ತರಾಖಂಡದ ಭೋಲೇ ಬಾಬಾ ಡೈರಿ ಮತ್ತು ಅದರ ಸಹ ಕಂಪನಿಗಳು ಪೂರೈಕೆ ಮಾಡಿದ 68 ಲಕ್ಷ ಕೆಜಿ ಅಂದರೆ ಒಟ್ಟು ತುಪ್ಪದ ಶೇಕಡ 42ರಷ್ಟು ನಕಲಿ ತುಪ್ಪ ಎಂಬುದನ್ನು ಎಸ್ಐಟಿ ಪತ್ತೆ ಮಾಡಿದೆ ಎಂದು ಹೇಳಿದ್ದಾರೆ.
