ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಮಾದರಿಯಲ್ಲಿ ಮತ್ತೊಂದು ಅಮಾನುಷ ಕೃತ್ಯ ಬೆಂಗಳೂರಿನಲ್ಲಿ ನಡೆದಿದೆ. ಯುವಕನನ್ನು ಕಿಡ್ನ್ಯಾಪ್ ಮಾಡಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಬಂದು ಬಟ್ಟೆ ಬಿಚ್ಚಿ ವಿಕೃತವಾಗಿ ಹಲ್ಲೆ ನಡೆಸಿದ ಘಟನೆ ಸೋಲದೇವನಹಳ್ಳಿಯಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಕುಶಾಲ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ.
ಘಟನೆ ಹಿನ್ನೆಲೆ
ಯುವತಿಯೋರ್ವಳನ್ನು ಕುಶಾಲ್ ಎಂಬ ಯುವಕ ಪ್ರೀತಿ ಮಾಡುತ್ತಿದ್ದನು. ಆದರೆ 2 ವರ್ಷದ ಹಿಂದೆ ಇಬ್ಬರ ನಡುವೆ ಪ್ರೀತಿ ಮುರಿದು ಬಿದ್ದಿತ್ತು. ಬಳಿಕ ಯುವತಿ ಬೇರೆ ಹುಡುಗನನ್ನು ಲವ್ ಮಾಡುತ್ತಿದ್ದಳು. ಇದನ್ನು ಸಹಿಸಲಾಗದೇ ಕುಶಾಲ್ ಯುವತಿಗೆ ಮೆಸೇಜ್ ಮಾಡಿದ್ದಾನೆ. ಈ ವಿಚಾರವನ್ನು ಯುವತಿ ತನ್ನ ಸ್ನೇಹಿತರಿಗೆ ತಿಳಿಸಿದ್ದು, ಯುವತಿ ಹಾಗೂ ಸ್ನೇಹಿತರು ಪ್ಲ್ಯಾನ್ ಮಾಡಿ ಮಾತುಕತೆ ಮಾಡುವುದಾಗಿ ಕುಶಾಲ್ ನನ್ನು ಕರೆಸಿ ಕಿಡ್ನ್ಯಾಪ್ ಮಾಡಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಬಂದಿದ್ದಾರೆ.
ನಂತರ ಕುಶಾಲ್ ನ ಬಟ್ಟೆ ಬಿಚ್ಚಿ ಕೋಲುಗಳಿಂದ ಹೊಡೆದು ಹಿಂಸಿಸಿದ್ದಾರೆ. ನಂತರ ಯುವಕನ ಮರ್ಮಾಂಗಕ್ಕೆ ಹೊಡೆದು, ತುಳಿದು ವಿಕೃತಿ ಮೆರೆದಿದ್ದಾರೆ. ನಂತರ ರೇಣುಕಾಸ್ವಾಮಿ ಕೇಸ್ ಪ್ರಸ್ತಾಪಿಸಿ… ನೀನು ರೇಣುಕಾಸ್ವಾಮಿ ಎಂದು ಹೇಳಿ ಹಲ್ಲೆ ನಡೆಸಿದ್ದಾರೆ. ಘಟನೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ತರ ಇದು ಆಗುತ್ತೆ ಎಂದು ಆರೋಪಿಗಳು ಹೇಳಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ನಾಲ್ವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಇದನ್ನು ವೀಡಿಯೋ ಮಾಡಿದ ಆರೋಪಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಘಟನೆ ಸಂಬಂಧ ನಾಲ್ವರು ಆರೋಪಿಗಳಾದ ಹೇಮಂತ್, ಯಶವಂತ್, ಶಿವಶಂಕರ್, ಮತ್ತು ಶಶಾಂಕ್ ಗೌಡನನ್ನು ಪೊಲೀಸರು ಬಂಧಿಸಿದ್ದಾರೆ.