ಶಿವಮೊಗ್ಗ: ಕಾರ್ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಶಿವಮೊಗ್ಗ ಜಿಲ್ಲೆಯ ಆಯನೂರು ಪಟ್ಟಣದ ಸರ್ಕಲ್ ನಲ್ಲಿ ಘಟನೆ ನಡೆದಿದೆ.
ರಿಪ್ಪನ್ ಪೇಟೆಯ ಹೊಸನಗರ ರಸ್ತೆಯ ನಿವಾಸಿ ಕಬೀರ್(54) ಮೃತಪಟ್ಟವರು ಎಂದು ಹೇಳಲಾಗಿದೆ. ಕಬೀರ್ ಕಾರ್ ನಲ್ಲಿ ತೆರಳುತ್ತಿದ್ದರು. ಕಾರ್ ಚಲಾಯಿಸುತ್ತಿದ್ದಾಗಲೇ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಎದೆ ನೋಯುತ್ತಿದೆ ಎಂದು ಪಕ್ಕದಲ್ಲಿದ್ದವರಿಗೆ ಹೇಳಿದ ಕೂಡಲೇ ಮೂರ್ಛೆ ಹೋಗಿದ್ದಾರೆ. ತಕ್ಷಣ ಕಾರಿನ ಬ್ರೇಕ್ ಹಾಕಿ ಪಕ್ಕದಲ್ಲಿದ್ದ ವ್ಯಕ್ತಿ ಕಾರ್ ನಿಲ್ಲಿಸಿದ್ದಾರೆ.
ಸ್ಥಳೀಯರ ಸಹಾಯ ಪಡೆದು ಆಯನೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಆಂಬುಲೆನ್ಸ್ ಮೂಲಕ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಕಬೀರ್ ಮೃತಪಟ್ಟಿರುವುದನ್ನು ಖಾಸಗಿ ಆಸ್ಪತ್ರೆ ವೈದ್ಯರು ದೃಢಪಡಿಸಿದ್ದಾರೆ ಎನ್ನಲಾಗಿದೆ.