ಬೆಂಗಳೂರು: ಮೈಸೂರು ಮತ್ತು ಬನ್ನೇರುಘಟ್ಟ ಮೃಗಾಲಯಗಳ ಪ್ರವೇಶ ಶುಲ್ಕವನ್ನು ಶೇಕಡ 20ರಷ್ಟು ಹೆಚ್ಚಳ ಮಾಡಲು ಕರ್ನಾಟಕ ಮೃಗಾಲಯ ಪ್ರಾಧಿಕಾರದ 159ನೇ ಆಡಳಿತ ಮಂಡಳಿ ಸಭೆ ನಿರ್ಧಾರ ಕೈಗೊಂಡಿದೆ.
ಅರಣ್ಯ ಸಚಿವ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಗುರುವಾರ ವಿಧಾನಸೌಧದಲ್ಲಿ ನಡೆದ ಕರ್ನಾಟಕ ಮೃಗಾಲಯ ಪ್ರಾಧಿಕಾರದ 159ನೇ ಆಡಳಿತ ಮಂಡಳಿ ಸಭೆಯಲ್ಲಿ ಈ ಕುರಿತಾಗಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗಿದೆ.
ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಹಾಗೂ ಬನ್ನೇರುಘಟ್ಟ ಮೃಗಾಲಯದಲ್ಲಿನ ಪಶು, ಪಕ್ಷಿಗಳ ನಿರ್ವಹಣಾ ವೆಚ್ಚ ಮತ್ತು ಸಿಬ್ಬಂದಿ ವೇತನ ಹೆಚ್ಚಳ ಹಿನ್ನೆಲೆಯಲ್ಲಿ ಪ್ರವೇಶ ದರವನ್ನು ಶೇಕಡ 50ರಷ್ಟು ಹೆಚ್ಚಿಸುವಂತೆ ಪ್ರಸ್ತಾಪಿಸಲಾಯಿತು. ಇದಕ್ಕೆ ಒಪ್ಪದ ಸಚಿವ ಈಶ್ವರ್ ಖಂಡ್ರೆ, ಏಕಾಏಕಿ ಶೇಕಡ 50ರಷ್ಟು ಶುಲ್ಕ ಹೆಚ್ಚಳ ಸರಿಯಲ್ಲ. ಪ್ರವಾಸಿಗರಿಗೆ ಹೊರೆಯಾಗುತ್ತದೆ. ಹೀಗಾಗಿ ಶೇಕಡ 20ರಷ್ಟು ಹೆಚ್ಚಳ ಮಾಡುವಂತೆ ಸೂಚಿಸಿದ್ದಾರೆ. ಸಫಾರಿ ದರ ಹೆಚ್ಚಿಸದಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.