ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ಒಸಿ(ಸ್ವಾಧೀನಾನುಭವ ಪತ್ರ) ಹೊಂದಿಲ್ಲದ ಯಾವುದೇ ವಾಣಿಜ್ಯ, ವಸತಿ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡಬಾರದು ಎಂದು ಬೆಸ್ಕಾಂ ಆದೇಶ ಹೊರಡಿಸಿದೆ.
ಒಸಿ ಇರುವ ಕಟ್ಟಡಗಳಿಗೆ ಮಾತ್ರ ವಿದ್ಯುತ್ ಸಂಪರ್ಕ ನೀಡುವಂತೆ ಕೆಇಆರ್‌ಸಿ ಸೂಚನೆಯಂತೆ ಬೆಸ್ಕಾಂ ಆದೇಶಿಸಿದೆ. ಇತರ ಎಸ್ಕಾಂಗಳಲ್ಲಿಯೂ ಇಂತವುದೇ ಆದೇಶ ಹೊರ ಬೀಳುವ ಸಾಧ್ಯತೆ ಇದೆ. ಈ ಆದೇಶದಿಂದ ಬೆಸ್ಕಾಂ ವ್ಯಾಪ್ತಿಯಲ್ಲಿ ಕಂದಾಯ ನಿವೇಶನ ಮತ್ತು ಬಿ ಖಾತಾ ಹೊಂದಿರುವ ನಿವೇಶನಗಳಲ್ಲಿನ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಮರೀಚಿಕೆಯಾಗಲಿದೆ. ಅಲ್ಲದೇ, ಜನಸಾಮಾನ್ಯರ ಜೀವನ ಮತ್ತು ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ದೊಡ್ಡ ಹೊಡೆತ ಬಿದ್ದಂತಾಗುತ್ತದೆ.
ಬೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಲ್ಲಿ ಒಸಿ ಹೊಂದಿಲ್ಲದ ಯಾವುದೇ ವಾಣಿಜ್ಯ, ವಸತಿ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡಬಾರದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಪಡೆಯದ ನಿವೇಶನದಾರರಿಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿ ಬೆಸ್ಕಾಂ ಆದೇಶ ಹೊರಡಿಸಿದೆ.
ನಕ್ಷೆ ಮಂಜೂರಾತಿ, ಒಸಿ ಇಲ್ಲದ ಕಟ್ಟಡಗಳಿಗೆ ವಿದ್ಯುತ್, ನೀರು ಸಂಪರ್ಕ ನೀಡದಂತೆ ಡಿಸೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಅದರ ಬೆನ್ನಲ್ಲೇ ಒಸಿ ಪ್ರಮಾಣ ಪತ್ರ ಇಲ್ಲದಿದ್ದರೆ ವಿದ್ಯುತ್ ಸಂಪರ್ಕ ನೀಡಬಾರದು ಎಂದು ಎಸ್ಕಾಂಗಳಿಗೆ ಕೆಎಆರ್‌ಸಿ ಯಿಂದ ಸೂಚನೆ ನೀಡಲಾಗಿತ್ತು. ಸುಪ್ರೀಂಕೋರ್ಟ್ ಮತ್ತು ಕೆಎಆರ್‌ಸಿ ಆದೇಶ ಪಾಲಿಸಲು ಅಧಿಕಾರಿಗಳಿಗೆ ಬೆಸ್ಕಾಂ ನಿರ್ದೇಶನ ನೀಡಿದೆ. ಇದೇ ರೀತಿ ಹುಬ್ಬಳ್ಳಿ, ಚಾಮುಂಡೇಶ್ವರಿ, ಕಲಬುರ್ಗಿ, ಮಂಗಳೂರು, ಹುಕ್ಕೇರಿ ವಿದ್ಯುತ್ ಸರಬರಾಜು ಕಂಪನಿಗಳಿಂದಲೂ ಆದೇಶ ಹೊರಬೀಳುವ ಸಾಧ್ಯತೆ ಇದೆ.
ಕಂದಾಯ ನಿವೇಶನ ಅಥವಾ ಬಿ ಖಾತಾ ನಿವೇಶನಗಳಿಗೆ ನಕ್ಷೆ ಮಂಜೂರಾತಿ ಕೊಡುವಂತಿಲ್ಲ. ನಕ್ಷೆ ಮಂಜೂರಾತಿಗೆ ಆಗದ ಕಾರಣ ಸ್ವಾಧೀನಾನುಭವ ಪತ್ರವೂ ಆ ಕಟ್ಟಡಗಳಿಗೆ ಸಿಗುವುದಿಲ್ಲ. ಇದರ ಪರಿಣಾಮ ನಿರ್ಮಾಣ ಹಂತದಲ್ಲಿರುವ, ಮುಂದೆ ನಿರ್ಮಿಸುವಂತಹ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಸಿಗುವುದಿಲ್ಲ. ನಕ್ಷೆ ಮಂಜೂರಾತಿ ಇಲ್ಲದಿದ್ದಲ್ಲಿ ಬೆಂಗಳೂರಿನಲ್ಲಿ ತಾತ್ಕಾಲಿಕ ವಿದ್ಯುತ್ ಸಂಪರ್ಕವೂ ಸಿಗುವುದಿಲ್ಲ ಎಂದು ಹೇಳಲಾಗಿದೆ.