ಶಿವಮೊಗ್ಗ: ಅಪಘಾತದಲ್ಲಿ ಕಾಲಿಗೆ ಪೆಟ್ಟು ಬಿದ್ದು ಕುಂಟುತ್ತಾ ನಡೆಯುತ್ತಿದ್ದುದಕ್ಕೆ ತನ್ನನ್ನು ಕುಂಟ ಎಂದು ಅಪಹಾಸ್ಯ ಮಾಡಿ ನಕ್ಕಿದ್ದ ಸಹೋದರನನ್ನೇ ವ್ಯಕ್ತಿಯೋರ್ವ ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಶಿವಮೊಗ್ಗ ನಗರದ ಪ್ರಿಯಾಂಕ ಬಡಾವಣೆಯಲ್ಲಿ ನಡೆದಿದೆ.
ಜನಾರ್ಧನ ಕೊಲೆಯಾಗಿರುವ ಯುವಕ. ಹನುಮಂತ ಸಹೋದರನನ್ನೇ ಕೊಂದ ಆರೋಪಿ. ಹನುಮಂತ ಹಾಗೂ ಜನಾರ್ಧನ ಇಬ್ಬರೂ ದೊಡ್ಡಪ್ಪ-ಚಿಕ್ಕಪ್ಪನ ಮಕ್ಕಳು. 5 ವರ್ಷಗಳ ಹಿಂದೆ ಸೇವಾಲಾಲ್ ಜಯಂತಿಗೆ ಸಹೋದರರಿಬ್ಬರೂ ತೆರಳಿದ್ದರು. ಈ ವೇಲೆ ಅಪಘಾತದಲ್ಲಿ ಹನುಮಂತನ ಕಾಲಿಗೆ ಪೆಟ್ಟಾಗಿತ್ತು. ಅಂದಿನಿಂದ ಹನುಮಂತ ಕುಂಟುತ್ತಾ ನಡೆಯುತ್ತಿದ್ದ. ಇದರಿಂದ ಜನಾರ್ಧನ ಸೇರಿ ಎಲ್ಲರೂ ಆತನನ್ನು ಕುಂಟ, ಕುಂಟ ಎಂದು ಲೇವಡಿ ಮಾಡುತ್ತಿದ್ದರು.
ತನ್ನನ್ನು ಅಪಹಾಸ್ಯ ಮಾಡುತ್ತಿರುವುದಕ್ಕೆ ಜೊತೆಗೆ ಹಳೇ ದ್ವೇಷದ ಕಾರಣಕ್ಕೆ ಕೋಪಗೊಂಡಿದ್ದ ಹನುಮಂತ, ಜನಾರ್ಧನನ್ನು ಮಾತನಾಡುವುದಿದೆ ಬಾ ಎಂದು ಕರೆದಿದ್ದ. ಜನಾರ್ಧನ ಬರುತ್ತಿದ್ದಂತೆ ಮಾತಿಗೆ ಮಾತು ಬೆಳೆಸಿ ಚಾಕುವಿನಿಂದ ಆತನ ಹೊಟ್ಟೆ, ಎದೆಯ ಭಾಗಕ್ಕೆ ಇರಿದು ಪರಾರಿಯಾಗಿದ್ದ. ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಜನಾರ್ಧನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಸದ್ಯ ಶಿವಮೊಗ್ಗ ಪೊಲೀಸರು ಆರೋಪಿ ಹನುಮಂತನನ್ನು ಬಂಧಿಸಿದ್ದಾರೆ.