ಶಿವಮೊಗ್ಗ: ಶಿವಮೊಗ್ಗ ದಸರಾ ಮೆರವಣಿಗೆಯ ವೇಳೆ ಬೆಳ್ಳಿ ಅಂಬಾರಿ ಹೊತ್ತು ಸಾಗುತ್ತಿದ್ದ ಸೋಮಣ್ಣ ಆನೆ ಏಕಾಏಕಿ ವಿಚಲಿತಗೊಂಡು ದಿಕ್ಕಾಪಾಲಾಗಿ ಓಡಿ ಆತಂಕ ಸೃಷ್ಟಿಸಿದ ಘಟನೆ ನಡೆದಿತ್ತು. ಪ್ರಕರಣ ಸಂಬಂಧಿಸಿದಂತೆ ಅರಣ್ಯ ಇಲಾಖೆ ನಡೆಸಿದ ಆಂತರಿಕ ತನಿಖಾ ವರದಿ ಈಗ ಬಹಿರಂಗವಾಗಿದೆ.
ಶಿವಮೊಗ್ಗ ಸಿಸಿಎಫ್ ಕೆ.ಟಿ. ಹನುಮಂತಪ್ಪ ಅವರು ಸರ್ಕಾರಕ್ಕೆ ಸಲ್ಲಿಸಿರುವ ಈ ವರದಿಯಲ್ಲಿ ಆನೆ ಭಯಗೊಳ್ಳಲು ಪ್ರಮುಖ ಕಾರಣವೇನು ಎಂಬುದನ್ನು ತಿಳಿಸಲಾಗಿದೆ.
ಸರ್ಕಾರದ ಅನುಮತಿ ಪಡೆದು ಅಕ್ಟೋಬರ್ 7ರಿಂದಲೇ ಸಕ್ರೆಬೈಲು ಆನೆ ಬಿಡಾರದಲ್ಲಿ ಸೋಮಣ್ಣ, ಬಹದ್ದೂರ್ ಹಾಗೂ ಸಾಗರ ಆನೆಗಳಿಗೆ ಪ್ರತಿನಿತ್ಯ ನಾಲ್ಕು ಕಿಲೋಮೀಟರ್ ನಡೆಸಿ ತಾಲೀಮು ಹಾಗೂ ಪೌಷ್ಟಿಕ ಆಹಾರ ನೀಡಲಾಗಿತ್ತು. ಅಕ್ಟೋಬರ್ 15ರಂದು ಶಿವಮೊಗ್ಗಕ್ಕೆ ಆಗಮಿಸಿದ ಈ ಆನೆಗಳಿಗೆ ಅಕ್ಟೋಬರ್ 16ರಿಂದ ನಗರದಲ್ಲೂ ತರಬೇತಿ ನೀಡಲಾಗಿತ್ತು. ಪಶುವೈದ್ಯರು ಹಾಗೂ ಅನುಭವಿ ಜಮೆದಾರರ ತಂಡ ಚರ್ಚಿಸಿಯೇ ಸೋಮಣ್ಣ ಆನೆಯನ್ನು ಅಂಬಾರಿಗೆ ಆಯ್ಕೆ ಮಾಡಿತ್ತು.
ಪ್ರತಿ ವರ್ಷದಂತೆ ರಾಮಣ್ಣ ಶ್ರೇಷ್ಠಿ ಪಾರ್ಕ್ ಸಮೀಪ ಮೆರವಣಿಗೆ ಸಾಗುವಾಗ ಜನಸಾಗರ ಹರಿದುಬಂದಿದೆ. ಇದರಿಂದಾಗಿ ಮೆರವಣಿಗೆಯಲ್ಲಿ ಜನರ ನಡಿಗೆ ನಿಧಾನಗೊಂಡ ಪರಿಣಾಮ, ಅಂಬಾರಿ ಹೊತ್ತ ಸೋಮಣ್ಣ ಆನೆಯ ನಡಿಗೆಯೂ ನಿಧಾನವಾಯಿತು. ನಡಿಗೆ ನಿಧಾನವಾದಾಗ ಆನೆ ಪಕ್ಕಕ್ಕೆ ತಿರುಗಲು ಆರಂಭಿಸಿದೆ. ಆ ಸಂದರ್ಭದಲ್ಲಿ ಆನೆ ಮೂತ್ರ ವಿಸರ್ಜನೆಗೆ ಸ್ಥಳಾವಕಾಶ ಮಾಡಿಕೊಳ್ಳುತ್ತಿದೆ ಎಂದು ಮಾವುತ ಮತ್ತು ಕಾವಾಡಿಗರು ಭಾವಿಸಿದ್ದರು. ಆದರೆ, ಸೋಮಣ್ಣ ಆನೆ ತಿರುಗಿದಾಗ ಹಿಂದೆ ಬರುತ್ತಿದ್ದ ಸಾಗರ ಮತ್ತು ಬಹದ್ದೂರ್ ಆನೆಗಳನ್ನು ನೋಡಿ ಏಕಾಏಕಿ ಆತಂಕಗೊಂಡಿದೆ. ತಕ್ಷಣ ಹೂಂಕರಿಸಿ, ಬಾಲ ಎತ್ತಿ ಗಾಬರಿಗೊಂಡು, ಆ ಎರಡೂ ಆನೆಗಳನ್ನು ತಳ್ಳಿ ಅಂಬಾರಿ ಸಮೇತ ಅಲ್ಲಿಂದ ಓಡಿದೆ.
ಸೋಮಣ್ಣ ಆನೆ ಕಾಡುಪ್ರಾಣಿಯಾಗಿರುವುದರಿಂದ ಜನರ ದಟ್ಟಣೆ ಹಾಗೂ ಇತರೆ ಆನೆಗಳನ್ನು ಕಂಡು ದಿಢೀರ್ ವಿಚಲಿತಗೊಂಡು ಈ ರೀತಿ ಮಾಡಿದೆ ಹೊರತು, ವರದಿಯಲ್ಲಿ ಎಲ್ಲಿಯೂ ಅರಣ್ಯ ಇಲಾಖೆಯ ಅಧಿಕಾರಿಗಳು ಅಥವಾ ಸಿಬ್ಬಂದಿಗಳ ನಿರ್ಲಕ್ಷ್ಯ ಕಂಡುಬಂದಿಲ್ಲ. ಹೀಗಾಗಿ ಯಾವುದೇ ಸಿಬ್ಬಂದಿಯ ಮೇಲೆ ಕ್ರಮ ಕೈಗೊಂಡಿಲ್ಲ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.

