ತಿರುವನಂತಪುರಂ: ಪ್ರಸಿದ್ಧ ಯಾತ್ರಾಸ್ಥಳ ಶಬರಿಮಲೆ ದೇವಸ್ಥಾನದ ವಿಗ್ರಹದಿಂದ ಕಾಣೆಯಾಗಿದ್ದ 4 ಕೆಜಿ ಚಿನ್ನ ಪತ್ತೆಯಾಗಿದೆ.
ದೇವಸ್ಥಾನದ ಗರ್ಭಗುಡಿ (ಸನ್ನಿಧಾನಂ)ಯ ಕೆಲಸ ಆರಂಭವಾದಾಗ 2019ರಲ್ಲಿ ದೇವಸ್ಥಾನದಿಂದ ಸುಮಾರು 42 ಕೆಜಿ ಚಿನ್ನವನ್ನು ತೆಗೆದುಕೊಳ್ಳಲಾಗಿದೆ. ಚಿನ್ನದ ತಟ್ಟೆಗಳನ್ನು ವಿಶೇಷ ಪ್ರಕ್ರಿಯೆ ಬಳಸಿ ಪುನಃ ಲೇಪಿಸಿ ಬಳಿಕ ಗರ್ಭಗುಡಿಯಲ್ಲಿ ಮರು ಸ್ಥಾಪಿಸಬೇಕಿಗಿತ್ತು. ಈ ಚಿನ್ನದ ತಟ್ಟೆಗಳನ್ನು ಹಿಂತಿರುಗಿಸಿ ದೇವಾಲಯದಲ್ಲಿ ಮರುಸ್ಥಾಪಿಸಿದಾಗ ಅವುಗಳ ತೂಕ ಸುಮಾರು 38 ಕೆಜಿ ಮಾತ್ರವಿತ್ತು. ಸುಮಾರು ೪.೪೫ ಕೆಜಿ ಚಿನ್ನ ಕಣ್ಮರೆಯಾಗಿತ್ತು. ಇದೀಗ ಆ ಚಿನ್ನ ಲಭ್ಯವಾಗಿದೆ ಎಂದು ತಿಳಿದುಬಂದಿದೆ.
ದೇವಸ್ಥಾನಕ್ಕೆ ಚಿನ್ನವನ್ನು ನೀಡಿದ್ದ ಪ್ರಾಯೋಜಕರ ಸಂಬಂಧಿಕರೊಬ್ಬರ ಮನೆಯಲ್ಲಿ ತಿರುವನಂತಪುರಂ ಉಪನಗರದಲ್ಲಿರುವ ವೆಂಜರಮೂಡು ಎಂಬಲ್ಲಿ ಈ ಚಿನ್ನ ಪತ್ತೆಯಾಗಿದೆ.
ಟಿಡಿಬಿ ವಿಜಿಲೆನ್ಸ್ ಹಾಗೂ ಭದ್ರತಾ ಪೊಲೀಸ್ ವರಿಷ್ಠಾಧಿಕಾರಿ ಸುನೀಲ್ ಕುಮಾರ್ ವಿ ನೇತೃತ್ವದ ತಂಡ ಬೆಂಗಳೂರಿನ ಮಲಯಾಳಿ ಉನ್ನಿಕೃಷ್ಣನ್ ಪೊಟ್ಟಿ ಅವರ ವೆಂಜರಮೂಡಿಯಲಿರುವ ಸಂಬಂಧಿಕರ ಮನೆಯಲ್ಲಿ ಚಿನ್ನ ಪತ್ತೆ ಮಾಡಿದೆ. ನಾವು ಚಿನ್ನವನ್ನು ವಶಕ್ಕೆ ಪಡೆದು ಶಬರಿಮಲೆಗೆ ಸ್ಥಳಾಂತರಿಸಿದ್ದೇವೆ. ಕೇರಳ ಹೈಕೋರ್ಟ್ ಗೆ ಈ ಬಗ್ಗೆ ವರದಿ ಸಲ್ಲಿಸಲಾಗುವುದು ಎಂದು ವಿಜಿಲೆನ್ಸ್ ಎಸ್ ಪಿ ಸುನಿಲ್ ಕುಮಾರ್ ತಿಳಿಸಿದ್ದಾರೆ.