BIG NEWS: ಕಂದಮ್ಮಗಳ ಕಳ್ಳರಿಗೆ ಕಠಿಣ ಶಿಕ್ಷೆ: ಸುಪ್ರೀಂ ಕೋರ್ಟ್‌ನಿಂದ ಮಹತ್ವದ ಆದೇಶ !

ದೇಶದಲ್ಲಿ ಹೆಚ್ಚುತ್ತಿರುವ ಮಕ್ಕಳ ಕಳ್ಳಸಾಗಣೆ ಪ್ರಕರಣಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಈ ಪಿಡುಗನ್ನು ಮಟ್ಟಹಾಕಲು ಕಠಿಣ ಕ್ರಮಗಳನ್ನು ಕೈಗೊಳ್ಳಲು ಆದೇಶಿಸಿದೆ. ಅದರಲ್ಲೂ ಯಾವುದೇ ಆಸ್ಪತ್ರೆಯಿಂದ ನವಜಾತ ಶಿಶು ನಾಪತ್ತೆಯಾದರೆ, ತಕ್ಷಣವೇ ಆ ಆಸ್ಪತ್ರೆಯ ಪರವಾನಗಿಯನ್ನು ರದ್ದುಪಡಿಸಬೇಕು ಎಂದು ನ್ಯಾಯಾಲಯ ಕಟ್ಟುನಿಟ್ಟಾಗಿ ಹೇಳಿದೆ.

ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಅವರಿದ್ದ ಪೀಠ, ಮಕ್ಕಳ ಕಳ್ಳಸಾಗಣೆ ಪ್ರಕರಣವೊಂದರಲ್ಲಿ ಆರೋಪಿಗೆ ಜಾಮೀನು ನೀಡಿದ್ದ ಅಲಹಾಬಾದ್ ಹೈಕೋರ್ಟ್‌ನ ಕ್ರಮವನ್ನು ತೀವ್ರವಾಗಿ ಖಂಡಿಸಿತು. ಅಲ್ಲದೆ, ಅನೇಕ ಆರೋಪಿಗಳು ತಲೆಮರೆಸಿಕೊಂಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿತು. “ಈ ಆರೋಪಿಗಳು ಸಮಾಜಕ್ಕೆ ಅಪಾಯಕಾರಿ. ಜಾಮೀನು ನೀಡುವಾಗ ಹೈಕೋರ್ಟ್ ಕನಿಷ್ಠ ನಿಯಮಗಳನ್ನು ಪಾಲಿಸಿಲ್ಲ. ಪೊಲೀಸರು ಆರೋಪಿಗಳ ಜಾಡನ್ನೇ ಕಳೆದುಕೊಂಡಿದ್ದಾರೆ” ಎಂದು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು.

ನ್ಯಾಯಮೂರ್ತಿ ಪರ್ದಿವಾಲಾ ಅವರು ಉತ್ತರ ಪ್ರದೇಶ ಸರ್ಕಾರ ಈ ವಿಷಯವನ್ನು ನಿರ್ವಹಿಸಿದ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾ, “ಮಗ ಬೇಕೆಂಬ ದುರಾಸೆಗೆ 4 ಲಕ್ಷ ಕೊಟ್ಟು ಕದ್ದ ಮಗುವನ್ನು ಪಡೆಯುವುದು ತಪ್ಪು. ಅದು ಕದ್ದ ಮಗು ಎಂದು ತಿಳಿದಿದ್ದರೂ ಹೀಗೆ ಮಾಡಿರುವುದು ಖಂಡನೀಯ” ಎಂದರು.

ಎಲ್ಲಾ ಆರೋಪಿಗಳು ತಕ್ಷಣ ಶರಣಾಗತರಾಗಬೇಕು ಮತ್ತು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಒಂದು ವಾರದೊಳಗೆ ಆರೋಪಪಟ್ಟಿ ದಾಖಲಿಸಬೇಕು. ಯಾರಾದರೂ ತಲೆಮರೆಸಿಕೊಂಡರೆ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಬೇಕು. ವಿಚಾರಣೆಯನ್ನು ವಿಳಂಬ ಮಾಡದೆ ಮುಂದುವರಿಸಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.

ಮಕ್ಕಳ ಕಳ್ಳಸಾಗಣೆಯನ್ನು ತಡೆಯಲು ನ್ಯಾಯಾಲಯವು ಹಲವು ಶಿಫಾರಸುಗಳನ್ನು ನೀಡಿದ್ದು, ರಾಜ್ಯ ಸರ್ಕಾರಗಳು ಅವುಗಳನ್ನು ಶೀಘ್ರವಾಗಿ ಜಾರಿಗೆ ತರಲು ಸೂಚಿಸಲಾಗಿದೆ. ದೇಶದ ಎಲ್ಲಾ ಹೈಕೋರ್ಟ್‌ಗಳು ಬಾಕಿ ಇರುವ ಮಕ್ಕಳ ಕಳ್ಳಸಾಗಣೆ ಪ್ರಕರಣಗಳ ವರದಿಯನ್ನು ನೀಡಬೇಕು. ಈ ಆದೇಶಗಳನ್ನು ಪಾಲಿಸದಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿದೆ.

ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು ಎಂದು ನ್ಯಾಯಮೂರ್ತಿ ಪರ್ದಿವಾಲಾ ಕಿವಿಮಾತು ಹೇಳಿದರು. “ಮಗು ಸತ್ತರೆ ದೇವರ ಬಳಿ ಇರುತ್ತದೆ, ಆದರೆ ಕಳ್ಳಸಾಗಣೆದಾರರ ಕೈಗೆ ಸಿಕ್ಕಿಹಾಕಿಕೊಂಡರೆ ಅವರ ದಯೆಯಲ್ಲಿ ಬದುಕಬೇಕಾಗುತ್ತದೆ” ಎಂದು ಅವರು ವಿಷಾದಿಸಿದರು. ಯಾವುದೇ ಆಸ್ಪತ್ರೆಯಿಂದ ಮಗು ನಾಪತ್ತೆಯಾದರೆ ತಕ್ಷಣ ಆ ಆಸ್ಪತ್ರೆಯ ಪರವಾನಗಿಯನ್ನು ರದ್ದುಪಡಿಸಬೇಕು ಎಂದು ಅವರು ಸ್ಪಷ್ಟವಾಗಿ ತಿಳಿಸಿದರು.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ ಸುಮಾರು 2,000 ಮಕ್ಕಳ ಕಳ್ಳಸಾಗಣೆ ಪ್ರಕರಣಗಳು ದಾಖಲಾಗುತ್ತಿವೆ. 2022 ರಲ್ಲಿ 2250 ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ತೆಲಂಗಾಣ, ಮಹಾರಾಷ್ಟ್ರ ಮತ್ತು ಬಿಹಾರದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read