ಪಾಣಿಪತ್, ಹರಿಯಾಣ: ಮದುವೆ ಸಂಭ್ರಮದ ಮನೆಯಲ್ಲಿ ನಡೆದ ಈ ಸರಣಿ ಕೊಲೆಯ ಕಥೆ ಕೇಳಿದರೆ ಎಂತಹವರ ಹೃದಯವೂ ಕಂಪಿಸುತ್ತದೆ. ತನಗಿಂತ ಬೇರೆ ಯಾರೂ ಸುಂದರವಾಗಿ ಕಾಣಬಾರದು ಎಂಬ ಕ್ರೂರ ಮತ್ಸರದಿಂದ, ಒಬ್ಬ ಮಹಿಳೆ ತನ್ನ 3 ವರ್ಷದ ಸ್ವಂತ ಮಗ ಸೇರಿ ನಾಲ್ವರು ಪುಟ್ಟ ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿರುವ ಭೀಕರ ಘಟನೆ ಹರಿಯಾಣದ ಪಾಣಿಪತ್ನಲ್ಲಿ ನಡೆದಿದೆ. ಪೊಲೀಸರು ಈ ‘ಸಾವಿನ ರಾಜಕುಮಾರಿ’ಯನ್ನು ಬಂಧಿಸಿದ್ದು, ಆಕೆಯ ದುಷ್ಕೃತ್ಯದ ಪೂರ್ಣ ವಿವರಗಳು ಹೊರಬಿದ್ದಿವೆ.
ಮದುವೆ ಮನೆಯಲ್ಲಿ ನಡೆದ ಭೀಕರ ಕೊಲೆ
ಘಟನೆ ನಡೆದದ್ದು ಪಾಣಿಪತ್ನ ನೌಲ್ತಾ ಗ್ರಾಮದಲ್ಲಿ. ಸಂಬಂಧಿಕರ ಮದುವೆ ಸಮಾರಂಭಕ್ಕಾಗಿ ಇಡೀ ಕುಟುಂಬ ಒಟ್ಟುಗೂಡಿತ್ತು. ಆರೋಪಿ ಮಹಿಳೆ ಪೂನಮ್ (Poonam) ತನ್ನ 6 ವರ್ಷದ ಅಳಿಯ ಮಗಳು ವಿಧಿಯನ್ನು (Vidhi) ಸೋಮವಾರ ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಧ್ಯಾಹ್ನ 1:30 ರ ಸುಮಾರಿಗೆ ಮದುವೆಯ ಮೆರವಣಿಗೆ ನಡೆಯುತ್ತಿದ್ದಾಗ, ಅತಿಥಿಗಳೆಲ್ಲಾ ಹೊರಗಡೆ ಇದ್ದರು. ಈ ಸಮಯವನ್ನು ಬಳಸಿಕೊಂಡ ಪೂನಮ್, ವಿಧಿಯನ್ನು ಮಾತುಕತೆಯಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡು ಮನೆಯ ಮೇಲ್ಛಾವಣಿಯ ಕೋಣೆಗೆ ಕರೆದುಕೊಂಡು ಹೋಗಿದ್ದಾಳೆ. ಅಲ್ಲಿ ಪ್ಲಾಸ್ಟಿಕ್ ಡ್ರಮ್ನಲ್ಲಿ ತುಂಬಿದ್ದ ನೀರಿಗೆ ಬಲವಂತವಾಗಿ ವಿಧಿಯ ತಲೆ ಮತ್ತು ಕುತ್ತಿಗೆಯನ್ನು ಮುಳುಗಿಸಿ, ಆಕೆ ಸಾಯುವವರೆಗೂ ಹಿಡಿದಿದ್ದಾಳೆ. ನಂತರ ಹೊರಗಿನಿಂದ ಬಾಗಿಲು ಲಾಚ್ ಹಾಕಿ ಕೆಳಗಿಳಿದಿದ್ದಾಳೆ.
ಒಂದು ಗಂಟೆಯ ನಂತರ ಮಗು ನಾಪತ್ತೆಯಾಗಿರುವುದನ್ನು ಅರಿತ ಕುಟುಂಬಸ್ಥರು ಹುಡುಕಾಟ ನಡೆಸಿದರು. ಅಜ್ಜಿ ಓಮಾವತಿ ಅವರು ಮೇಲ್ಛಾವಣಿಯ ಕೋಣೆಯನ್ನು ತೆರೆದಾಗ, ನೀರಿನ ಡ್ರಮ್ನಲ್ಲಿ ಮಗು ತಲೆ ಮುಳುಗಿದ ಸ್ಥಿತಿಯಲ್ಲಿ ಪತ್ತೆಯಾಯಿತು. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮಗು ಸಾವನ್ನಪ್ಪಿತ್ತು.
ಕಾರಣ: ಮತ್ಸರ ಮತ್ತು ಸೌಂದರ್ಯದ ದ್ವೇಷ!
ಮಗುವಿನ ಅಜ್ಜನ ದೂರಿನ ಮೇರೆಗೆ ತನಿಖೆ ನಡೆಸಿದಾಗ, ವಿಧಿಯ ಚಿಕ್ಕಮ್ಮನೇ ಆಗಿರುವ ಪೂನಮ್ ಬಂಧಿಯಾದಳು. ಪೊಲೀಸರ ವಿಚಾರಣೆ ವೇಳೆ ಆಕೆ ಆಘಾತಕಾರಿ ಸತ್ಯವನ್ನು ಬಾಯ್ಬಿಟ್ಟಿದ್ದಾಳೆ.
ಆರೋಪಿ ಪೂನಮ್ “ನನ್ನ ಕುಟುಂಬದಲ್ಲಿ ನನ್ನಿಗಿಂತ ಯಾರೂ ಹೆಚ್ಚು ಸುಂದರವಾಗಿ ಕಾಣಬಾರದು” ಎಂಬ ದ್ವೇಷ ಮತ್ತು ತೀವ್ರ ಮತ್ಸರದಿಂದ ಈ ಕೊಲೆಗಳನ್ನು ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಆಕೆ ನಿರ್ದಿಷ್ಟವಾಗಿ ಚಿಕ್ಕ ವಯಸ್ಸಿನ, ಸುಂದರ ಹುಡುಗಿಯರನ್ನೇ ಗುರಿಯಾಗಿಸಿಕೊಂಡಿದ್ದಳು.
ಸರಣಿ ಕೊಲೆಯ ಆಘಾತಕಾರಿ ವಿವರಗಳು
ಪೂನಮ್ ಈ ಹಿಂದೆ ಇನ್ನೂ ಮೂವರು ಮಕ್ಕಳನ್ನು ಇದೇ ರೀತಿಯಲ್ಲಿ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾಳೆ ಎಂಬುದು ತನಿಖೆಯಿಂದ ಬಯಲಾಗಿದೆ:
- 2023 ರಲ್ಲಿ: ತನ್ನ ಅತ್ತಿಗೆಯ 9 ವರ್ಷದ ಮಗಳು ಇಶಿಕಾಳನ್ನು ನೀರಿನ ಟ್ಯಾಂಕ್ನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಳು.
- ಸಂಬಂಧಿಕರಿಗೆ ಅನುಮಾನ ಬರುತ್ತದೆ ಎಂಬ ಭಯದಿಂದ, ತನ್ನದೇ 3 ವರ್ಷದ ಮಗ ಶುಭಂನನ್ನು ಸಹ ಇದೇ ರೀತಿ ಮುಳುಗಿಸಿ ಕೊಲೆ ಮಾಡಿದ್ದಳು.
- ಈ ವರ್ಷ ಆಗಸ್ಟ್ನಲ್ಲಿ: ತನ್ನ ಸೋದರ ಸಂಬಂಧಿಯ 6 ವರ್ಷದ ಮಗಳು ಜಿಯಾ “ನನಗಿಂತ ಸುಂದರವಾಗಿದ್ದಾಳೆ” ಎಂಬ ಕಾರಣಕ್ಕೆ ಆಕೆಯನ್ನೂ ಕೊಲೆ ಮಾಡಿದ್ದಳು.
ಈ ಎಲ್ಲಾ ಸಾವುಗಳು ಆಕಸ್ಮಿಕ ಎಂದು ಈ ಮೊದಲು ಭಾವಿಸಲಾಗಿತ್ತು. ಆದರೆ ವಿಧಿ ಕೊಲೆ ಪ್ರಕರಣದಲ್ಲಿ ಪೂನಮ್ ಬಾಯಿಬಿಟ್ಟ ಮೇಲೆ, ಆಕೆಯ ಸರಣಿ ಕೊಲೆಯ ಕೃತ್ಯ ಜಗಜ್ಜಾಹೀರಾಗಿದೆ.
