ಹೊಸಪೇಟೆ(ವಿಜಯನಗರ ಜಿಲ್ಲೆ): ಹಿರಿಯ ಕತೆಗಾರ, ವಿಮರ್ಶಕ ಹಾಗೂ ಚಿಂತಕ ಡಾ. ಮೊಗಳ್ಳಿ ಗಣೇಶ್(64) ಭಾನುವಾರ ಬೆಳಗ್ಗೆ ಹೊಸಪೇಟೆಯ ತಮ್ಮ ನಿವಾಸದಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಅವರಿಗೆ ಪತ್ನಿ ಮತ್ತು ಮೂವರು ಪುತ್ರಿಯರು ಇದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ 28 ವರ್ಷ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಮೊಗಳ್ಳಿ ಗಣೇಶ್ ಕತೆಗಾರರಾಗಿದ್ದರು. 10 ಸಂಶೋಧನಾ ಯೋಜನೆಗಳ ಭಾಗವಾಗಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ದಲಿತ ಚಿಂತಕರಾಗಿದ್ದ ಅವರು ದೇಶದ ಪ್ರತಿಷ್ಠಿತ ವಿವಿಗಳಿಗೆ ಆಹ್ವಾನಿತರಾಗಿ ಉಪನ್ಯಾಸ ನೀಡಿದ್ದಾರೆ.
ಹಂಪಿ ವಿವಿ ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ, ಡಾ.ರಾಜ್ ಕುಮಾರ್ ಅಧ್ಯಯನ ಪೀಠದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದು, ಪ್ರಸ್ತುತ ಹಾವೇರಿಯ ಕರ್ನಾಟಕ ಜಾನಪದ ವಿವಿ ಸಿಂಡಿಕೇಟ್ ಸದಸ್ಯರಾಗಿದ್ದರು.
ಬುಗುರಿ, ಮಣ್ಣು, ಅತ್ತೆ, ದೇವರ ದಾರಿ ಕಥಾ ಸಂಕಲನಗಳು. 1963ರ ಜುಲೈ 1ರಂದು ಚನ್ನಪಟ್ಟಣ ತಾಲೂಕಿನ ಸಂತೇಮೊಗೆನಹಳ್ಳಿಯಲ್ಲಿ ಜನಿಸಿದ ಗಣೇಶ್ ಅರ್ಥಶಾಸ್ತ್ರ ಮತ್ತು ಜಾನಪದ ಓದಿಕೊಂಡಿದ್ದರು. ತೊಟ್ಟಿಲು, ಕಿರೀಟ, ಕಾದಂಬರಿಗಳು, ಸೊಲ್ಲು, ವಿಮರ್ಶೆ, ವಿಮರ್ಶಾ ಕೃತಿಗಳು, ವಿಶ್ಲೇಷಣೆ ಅಂಕಣ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಅವರ ನಿಧನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸಂತಾಪ ಸೂಚಿಸಿದ್ದಾರೆ. ಮೊಗಳ್ಳಿ ಗಣೇಶ್ ನಿಧನದಿಂದ ಅತ್ಯುತ್ತಮ ಬರಹಗಾರರನ್ನು ಕನ್ನಡ ಸಾಹಿತ್ಯ ಲೋಕ ಕಳೆದುಕೊಂಡಿದೆ ಎಂದು ತಿಳಿಸಿದ್ದಾರೆ.