ಬೆಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರ ಮುಂಬಡ್ತಿ ಮತ್ತು ಇತರ ಸೇವಾ ಜೇಷ್ಠತೆ ಬೇಡಿಕೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ನೀಡಿದ್ದ ಭರವಸೆ ಈಡೇರದ ಹಿನ್ನೆಲೆಯಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯವ್ಯಾಪಿ ಹಂತ ಹಂತವಾಗಿ ಹೋರಾಟ ನಡೆಸಲು ತೀರ್ಮಾನ ಕೈಗೊಂಡಿದೆ.
ಆಗಸ್ಟ್ 12ರಂದು ಪ್ರತಿ ಜಿಲ್ಲಾ ಕೇಂದ್ರದಲ್ಲಿ ಮತ್ತು ತಾಲೂಕಿನಲ್ಲಿ ಎಲ್ಲ ಜಿಲ್ಲೆ ಪ್ರದಾಧಿಕಾರಿಗಳು, ಪ್ರತಿನಿಧಿಗಳು, ನಾಮ ನಿರ್ದೇಶಕ ಪದಾಧಿಕಾರಿಗಳು ಸೇರಿ ಜಿಲ್ಲಾಧಿಕಾರಿಗಳು ಮತ್ತು ಡಿಡಿಪಿಐಗಳ ಮೂಲಕ ಮುಖ್ಯಮಂತ್ರಿ, ಶಿಕ್ಷಣ ಸಚಿವರು, ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಬೇಡಿಕೆ ಒಳಗೊಂಡ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ.
ಆಗಸ್ಟ್ 27ರವರೆಗೆ ಬೇಡಿಕೆ ಈಡೇರಿಸದಿದ್ದರೆ ಸೆಪ್ಟೆಂಬರ್ 3ರಂದು ರಾಜ್ಯದ ಎಲ್ಲಾ ಶಿಕ್ಷಕರು ಸಾಂದರ್ಭಿಕ ರಜೆ ಹಾಕಿ ಸ್ವಾತಂತ್ರ್ಯ ಉದ್ಯಾನದಲ್ಲಿ ರಾಜ್ಯಮಟ್ಟದ ಬೃಹತ್ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ತಿಳಿಸಿದ್ದಾರೆ.