ದಾಖಲಾತಿ ಕಡಿಮೆ ಇರುವ ಶಾಲೆಗಳಿಗೆ ಕುತ್ತು: 6 ಸಾವಿರ ಶಾಲೆಗಳ ವಿಲೀನ: ಶೇ. 25 ರಷ್ಟು ಶಾಲೆಗಳಿಗೆ ಬೀಗ

ಬೆಂಗಳೂರು: ವಿರೋಧದ ನಡುವೆಯೂ ದಾಖಲಾತಿ ಕಡಿಮೆ ಇರುವ ಪ್ರಾಥಮಿಕ ಶಾಲೆಗಳ ವಿಲೀನಕ್ಕೆ ಸರ್ಕಾರ ಮುಂದಾಗಿದೆ. ಇದರಿಂದ ರಾಜ್ಯದ 6,000ಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳಿಗೆ ಆಪತ್ತು ಎದುರಾಗಿದೆ.

ಮೊದಲ ಹಂತದಲ್ಲಿ 8 ಶೈಕ್ಷಣಿಕ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಗಳನ್ನು ವಿಲೀನ ಮಾಡಿ ಮಾದರಿ ಶಾಲೆಗಳನ್ನು ನಡೆಸುವ ಕಾರ್ಯ ಯೋಜನೆ ಕೈಗೊಳ್ಳಲಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗ ಕೂಡ ಇದರಲ್ಲಿ ಸೇರಿದೆ. ಕಾರವಾರ, ಶಿರಸಿ ಸೇರಿ ಅನೇಕ ಶೈಕ್ಷಣಿಕ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಮಾದರಿ ಶಾಲೆಗಳನ್ನು ಗುರುತಿಸಿ ವರದಿ ಸಲ್ಲಿಸಲಾಗಿದೆ.

10ಕ್ಕಿಂತ ಕಡಿಮೆ ಇರುವ ಮಕ್ಕಳಿರುವ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಹೀಗಾಗಿ ಸಮೀಪದ ಶಾಲೆಗಳಿಗೆ ಇಂತಹ ಶಾಲೆಗಳನ್ನು ವಿಲೀನ ಮಾಡಬೇಕೆಂದು ಶಾಲಾ ಸುಧಾರಣಾ ಆಯೋಗ ಹಿಂದಿನ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಇದಕ್ಕೆ ವಿರೋಧ ವ್ಯಕ್ತವಾಗಿದೆ.

ಹೀಗಿದ್ದರೂ ವಾಹನಗಳ ಮೂಲಕ ದೂರದ ಹಳ್ಳಿ ಮಕ್ಕಳನ್ನು ಶಾಲೆಗೆ ಕರೆ ತರುವುದಾಗಿ ರಾಜ್ಯ ಸರ್ಕಾರ ಪ್ರಯೋಗಕ್ಕೆ ಮುಂದಾಗಿದ್ದು, ಇದರಿಂದ ಸಾವಿರಾರು ಸರ್ಕಾರಿ ಶಾಲೆಗಳು ಮುಚ್ಚಲಿವೆ. 10ಕ್ಕಿಂತ ಕಡಿಮೆ ದಾಖಲಾತಿರುವ 3457 ಸರ್ಕಾರಿ ಶಾಲೆಗಳನ್ನು ಆಯೋಗ ಪ್ರಸ್ತಾವ ಸಲ್ಲಿಸುವ ವೇಳೆ ಗುರುತಿಸಲಾಗಿತ್ತು. ಇತ್ತೀಚೆಗೆ ಬಿಡುಗಡೆಯಾದ ವರದಿಯ ಪ್ರಕಾರ ದಾಖಲಾತಿ ಕಡಿಮೆ ಇರುವ ಪ್ರಾಥಮಿಕ ಶಾಲೆಗಳ ಸಂಖ್ಯೆ 6 ಸಾವಿರಕ್ಕೆ ಏರಿಕೆಯಾಗಿದೆ. ಈ ಎಲ್ಲ ಶಾಲೆಗಳು ವಿಲೀನವಾದರೆ ರಾಜ್ಯದಲ್ಲಿ ಶೇಕಡ 25ರಷ್ಟು ಸರ್ಕಾರಿ ಶಾಲೆಗಳಿಗೆ ಬೀಗ ಬೀಳಲಿದೆ ಎಂದು ಹೇಳಲಾಗಿದೆ.

ರಾಜ್ಯದಲ್ಲಿ ಒಟ್ಟು 23,436 ಕಿರಿಯ ಪ್ರಾಥಮಿಕ ಶಾಲೆಗಳಿವೆ. 10 ಕಿಂತ ಕಡಿಮೆ ವಿದ್ಯಾರ್ಥಿಗಳಿರುವ 6,000 ಶಾಲೆಗಳಿದ್ದು, 7821 ಏಕೋಪಾಧ್ಯಾಯ ಶಾಲೆಗಳಿವೆ. 2023ರಲ್ಲಿ 1078 ಶಾಲೆಗಳು ಶೂನ್ಯ ದಾಖಲಾತಿ ಪಡೆದಿವೆ. ಇಂತಹ ಶಾಲೆಗಳಲ್ಲಿ 1572 ಶಿಕ್ಷಕರಿದ್ದಾರೆ. ಸತತ ಮೂರು ವರ್ಷ ಶೂನ್ಯ ದಾಖಲಾತಿಯಾಗುವ 10ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಮುಚ್ಚಲಾಗುವುದು ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read