ಬೆಂಗಳೂರು : ರಾಜ್ಯದ ಶಾಲಾ ಮಕ್ಕಳಿಗೆ ಸಂಚಾರ ಜಾಗೃತಿ ನಿಯಮದ ಕುರಿತು ಶಾಲೆ ಪಠ್ಯದಲ್ಲಿ ಪಾಠ ಸೇರಿಸುವ ಕೆಲಸ ಶುರು ಮಾಡಲಾಗಿದೆ.
ಈ ಕುರಿತು ಬೆಂಗಳೂರು ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್.ಅನುಚೇತ್ ಮಾಹಿತಿ ನೀಡಿದ್ದು, ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ಪಾಠ ಸಿದ್ಧಪಡಿಸಿ, ಡಿಎಸ್‌ಇಆರ್‌ಟಿಗೆ ಸಲ್ಲಿಸಲಾಗಿದೆ. ಅವರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಮುಂದಿನ ವರ್ಷವೇ ಪಠ್ಯದಲ್ಲಿ ಪಾಠ ಸೇರ್ಪಡೆಯಾಗುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
‘ಶಾಲಾ ಮಕ್ಕಳಲ್ಲಿ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪಾಠವೊಂದನ್ನು ಸಿದ್ಧಪಡಿಸಿದ್ದು, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಗೆ ಸಲ್ಲಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ 1 ರಿಂದ 10ನೇ ತರಗತಿಯ ಪಠ್ಯದಲ್ಲಿ ಸೇರಿಸುವುದಾಗಿ ಡಿಎಸ್‌ಇಆರ್‌ಟಿ ಮಾಹಿತಿ ನೀಡಿದೆ.