ವಿಧಾನಪರಿಷತ್ತಿನ ಬೆಂಗಳೂರು ಶಿಕ್ಷಕರ ಮತದಾರರ ಪಟ್ಟಿ ತಯಾರಿಕೆಗೆ ವೇಳಾಪಟ್ಟಿ ಪ್ರಕಟ

ಭಾರತ ಚುನಾವಣಾ ಆಯೋಗವು 2025 ನೇ ಸೆಪ್ಟೆಂಬರ್ 12 ರಂದು ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯ ತಯಾರಿಕೆ ಕಾರ್ಯಕ್ಕೆ ಸಂಬಂಧಪಟ್ಟಂತೆ ವೇಳಾಪಟ್ಟಿಯನ್ನು ಪ್ರಕಟಿಸಿದೆ ಎಂದು ಸಹಾಯಕ ಮತದಾರರ ನೋಂದಣಾಧಿಕಾರಿ ಬೆಂಗಳೂರು ಶಿಕ್ಷಕರ ಕ್ಷೇತ್ರ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಗದೀಶ್.ಜಿ ಅವರು ತಿಳಿಸಿದ್ದಾರೆ.

ಭಾರತ ಚುನಾವಣಾ ಆಯೋಗದಿಂದ ಮೊದಲನೇ ಸೂಚಿಯನ್ನು 2025 ನೇ ಸೆಪ್ಟೆಂಬರ್ 30 ರಂದು ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿದ್ದು, ಈ ದಿನದಿಂದಲೇ ಮತದಾರರ ಪಟ್ಟಿಯಲ್ಲಿ ನೋಂದಣಿಗಾಗಿ ನಮೂನೆ 19 ರಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಗುವುದು.

ಈ ಕಾರ್ಯಕ್ಕೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಮತದಾರರ ನೋಂದಾಣಾಧಿಕಾರಿಗಳಾಗಿದ್ದು, ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ, ಉಪವಿಭಾಗಾಧಿಕಾರಿ, ಬೆಂಗಳೂರು ಉತ್ತರ ಮತ್ತು ದಕ್ಷಿಣ ಉಪವಿಭಾಗ, ಬೆಂಗಳೂರು ನಗರ ಜಿಲ್ಲೆಯ ಎಲ್ಲಾ 7-ವಿಧಾನಸಭಾ ಕ್ಷೇತ್ರಗಳ ಕಂದಾಯ ಅಧಿಕಾರಿಗಳು, ಜಿ.ಬಿ.ಎ ಹಾಗೂ ಜಿಲ್ಲೆಯ ಎಲ್ಲಾ ತಹಶೀಲ್ದಾರರು ಸಹಾಯಕ ಮತದಾರರ ನೋಂದಣಾಧಿಕಾರಿಗಳಾಗಿರುತ್ತಾರೆ. ಅಲ್ಲದೆ ವಿಧಾನಸಭಾ ಕ್ಷೇತ್ರವಾರು ನಿಯೋಜಿತ ಅಧಿಕಾರಿಗಳು ಮತ್ತು ಹೆಚ್ಚುವರಿ ನಿಯೋಜಿತ ಅಧಿಕಾರಿಗಳನ್ನು ಸಹ ನೇಮಿಸಲಾಗಿದೆ.

ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯ ಪರಿಷ್ಕರಣೆಗೆ 2025 ನೇ ನವೆಂಬರ್ 01 ನ್ನು ಅರ್ಹತಾ ದಿನಾಂಕವನ್ನಾಗಿಟ್ಟುಕೊಂಡು, 2025 ನೇ ಸೆಪ್ಟೆಂಬರ್ 30 ರಿಂದ ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ನೋಂದಾಯಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಗಾಗಿ ಮತದಾರರ ಪಟ್ಟಿ ತಯಾರಿಕೆ ಸಂಬಂಧ 2025 ನೇ ಸೆಪ್ಟೆಂಬರ್ 30 ರಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು, ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಿದ್ದು, ಅರ್ಹ ಶಿಕ್ಷಕರು ಮತದಾರರ ಪಟ್ಟಿಗೆ ಸೇರ್ಪಡಿಸಲು 2025 ನೇ ಸೆಪ್ಟೆಂಬರ್ 30 ರಿಂದ ನವೆಂಬರ್ 6 ರವರೆಗೆ ನಮೂನೆ-19ರಲ್ಲಿ ಅರ್ಜಿಗಳನ್ನು ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ.

ಅರ್ಹ ಶಿಕ್ಷಕರು ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ನಮೂನೆ-19ರ ಅರ್ಜಿಯನ್ನು ಭರ್ತಿ ಮಾಡಿ, ಅರ್ಜಿಯೊಂದಿಗೆ ಆಯಾ ಶಾಲಾ ಮುಖ್ಯಸ್ಥರಿಂದ ಅನುಬಂಧ-2 ರಲ್ಲಿ ಪ್ರಮಾಣ ಪತ್ರವನ್ನು ಪಡೆದು ಸಂಬಂಧಪಟ್ಟ ಗೊತ್ತುಪಡಿಸಿದ ಅಧಿಕಾರಿಗೆ ಸಲ್ಲಿಸತಕ್ಕದ್ದು.

ಅರ್ಜಿ ಸಲ್ಲಿಸಲಿರುವ ಅರ್ಹ ಶಿಕ್ಷಕರು ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಥಳೀಯ ನಿವಾಸಿಯಾಗಿರತಕ್ಕದ್ದು, ಪ್ರಜಾ ಪ್ರತಿನಿಧಿ ಕಾಯ್ದೆ 1950 ರ ಕಲಂ 27(3)ರಲ್ಲಿ ನಿರ್ಧಿಷ್ಟಪಡಿಸಲಾಗಿರುವ ಶಿಕ್ಷಣ ಸಂಸ್ಥೆಗಳಲ್ಲಿ ಅರ್ಹತಾ ದಿನಾಂಕ 2025 ನೇ ನವೆಂಬರ್ 1 ಕ್ಕೆ ಆರು ವರ್ಷಗಳ ಪೂರ್ವದ ಅವಧಿಯೊಳಗೆ, ಕನಿಷ್ಟ 3 ವರ್ಷಗಳು ಶಿಕ್ಷಕರಾಗಿ ಪ್ರೌಢಶಾಲಾ ಶಿಕ್ಷಣಕ್ಕಿಂತ ಕಡಿಮೆ ಇಲ್ಲದಂತೆ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಬೋದನೆ ಮಾಡಿರಬೇಕು.

ಈ 3 ವರ್ಷಗಳ ಅವಧಿಯಲ್ಲಿ ಶಿಕ್ಷಕರು ಒಂದಕ್ಕಿಂತ ಮೇಲ್ಪಟ್ಟು ಶಿಕ್ಷಣ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರೂ ಸಹ ಅಂತಹ ಅವಧಿಯನ್ನು ಸಹ ಪರಿಗಣಿಸಲಾಗುವುದು ಹಾಗೂ ಪ್ರತ್ಯೇಕವಾಗಿ ಆಯಾ ಶಾಲಾ ಶಿಕ್ಷಣ ಸಂಸ್ಥೆಯಿಂದ ಅನುಬಂಧ-2ರಲ್ಲಿ ಕಡ್ಡಾಯವಾಗಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕು,

ಸ್ವೀಕೃತವಾಗುವ ನಮೂನೆ-19ಗಳನ್ನು ನಿಯಮಾನುಸಾರ ಪರಿಶೀಲಿಸಿ 2025 ನೇ ನವೆಂಬರ್ 6 ರ ಒಳಗಾಗಿ ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಿ, ಪರಿಶೀಲಿಸಿಕೊಂಡು 2025 ನೇ ನವೆಂಬರ್ 25 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು.

ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು 2025 ನೇ ನವೆಂಬರ್ 25 ರಿಂದ ಡಿಸೆಂಬರ್ 10 ರವರೆಗೆ ಅವಕಾಶವನ್ನು ಕಲ್ಪಿಸಲಾಗಿದೆ.

ಸ್ವೀಕೃತವಾಗುವ ಹಕ್ಕು ಮತ್ತು ಆಕ್ಷೇಪಣೆಗಳನ್ನು 2025 ನೇ ಡಿಸೆಂಬರ್ 10 ರೊಳಗಾಗಿ ನಿಯಮಾನುಸಾರ ಇತ್ಯರ್ಥಪಡಿಸಲಾಗುವುದು.

ಅಂತಿಮ ಮತದಾರರ ಪಟ್ಟಿಯನ್ನು 2025 ನೇ ಡಿಸೆಂಬರ್ 30 ರಂದು ಪ್ರಕಟಿಸಲಾಗುವುದು. ಈ ಅಂಶಗಳ ಅನುಸಾರ ಶಿಕ್ಷಕರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಅರ್ಹರಾಗಿರುತ್ತಾರೆ. ಇದಕ್ಕಾಗಿ ನಮೂನೆ – 19 ರಲ್ಲಿ ವಿವರಗಳನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ/ ನಿಯೋಜಿತ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸತಕ್ಕದ್ದು. ನಮೂನೆ-19 ಅರ್ಜಿಗಳನ್ನು ನಿಯಮಾನುಸಾರ ಅಂಗೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರ ಮತದಾರರ ನೋಂದಣಾಧಿಕಾರಿ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ ಇರುತ್ತದೆ.

ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಅರ್ಹ ಶಿಕ್ಷಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನಿಗಧಿತ ದಿನಾಂಕದೊಳಗೆ ಅಗತ್ಯ ದಾಖಲೆಗಳೊಂದಿಗೆ ಮತದಾರರ ನೊಂದಣಾಧಿಕಾರಿ ಸಂಬಂಧಪಟ್ಟ ಸಹಾಯಕ ಮತದಾರರ ನೊಂದಣಾಧಿಕಾರಿ ಹಾಗೂ ನಿಯೋಜಿತ ಅಧಿಕಾರಿಗಳಿಗೆ ನಿಗಧಿತ ನಮೂನೆಯಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಮುಖ್ಯ ಚುನಾವಣಾಧಿಕಾರಿಗಳು, ಕರ್ನಾಟಕ ಅವರ ಅಂತರ್ಜಾಲ ತಾಣ https://ceo.karnataka.gov.in/ ನಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿರುತ್ತದೆ ಎಂದು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read