ಬೆಳಗಾವಿ: ರಾಜ್ಯದ ಪ್ರಸಿದ್ಧ ಯಾತ್ರಾಸ್ಥಳ ಬೆಳಗಾವಿಯ ಸವದತ್ತಿ ರೇಣುಕಾ ಯಲ್ಲಮ್ಮನ ಗುಡ್ದದಲ್ಲಿ ಅನಧಿಕೃತ ಮಳಿಗೆಗಳ ತೆರವು ಕಾರ್ಯ ನಡೆಸಲಾಗುತ್ತಿದೆ. ಅಂಗಡಿ, ಮಳಿಗೆಗಳ ತೆರವಿಗೆ ವ್ಯಾಪಾರಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಪ್ರತಿಭಟನೆ ನಡೆಸಿದ್ದಾರೆ.
ರಾಜ್ಯ ಸರ್ಕಾರ ಸವದತ್ತಿ ಯಲ್ಲಮ್ಮ ಕ್ಷೇತ್ರದ ಸಕಲ ಅಭಿವೃದ್ಧಿಗೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಯಲ್ಲಮ್ಮ ಗುಡ್ಡ ಅಭಿವೃದ್ಧಿ ಪ್ರಾಧಿಕಾರ ರಚಿಸಿ, ಅಶೋಕ್ ದುಡಗುಂಟಿ ಪ್ರಾಧಿಕಾರದ ಆಯುಕ್ತರಾಗಿದ್ದಾರೆ. ಇಂದು ಆಯುಕ್ತರ ನೇತೃತ್ವದಲ್ಲಿ ದೇವಸ್ಥಾನದ ಆವರಣದಲ್ಲಿರುವ ಅನಧಿಕೃತ ಮಳಿಗೆಗಳ ತೆರವಿಗೆ ಆಡಳಿತ ಮಂಡಳಿ ಮುಂದಾಗಿದೆ.
ಬಿಗಿ ಪೊಲೀಸ್ ಭದ್ರತೆಯಲ್ಲಿ ತೆರವು ಕಾರ್ಯ ನಡೆಸಲು ಮುಂದಾಗುತ್ತಿದ್ದಂತೆ ವ್ಯಾಪಾರಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಜೀವನಕ್ಕೆ ಆಧಾರವಗಿರುವ ಮಳಿಗೆಗಳನ್ನು ತೆರವು ಮಾಡದಂತೆ ಮನವಿ ಮಾಡಿದ್ದಾರೆ. ಈ ವೇಳೆ ಪ್ರತಿಭಟನೆ ನಡೆಸಿದ ಮಳಿಗೆಗಳ ಮಾಲೀಕರು, ವ್ಯಾಪಾರಸ್ಥರು, ಸ್ಥಳೀಯರು ಆಯುಕ್ತ ಅಶೋಕ್ ದುಡಗುಂಟಿ ಅವರ ಕಚೇರಿಗೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.