ಬೆಂಗಳೂರು: ಧರ್ಮಸ್ಥಳದ ವಿರುದ್ಧ ಅಪಪ್ರಚಾರ, ಷಡ್ಯಂತ್ರ ನಡೆಸಿರುವುದರ ಹಿಂದೆ ಮಾಜಿ ಡಿಸಿ, ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್ ಕೈವಾಡವಿದೆ ಎಂದು ಆರೋಪಿಸಿದ್ದ ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ವಿರುದ್ಧ ಸಿಡಿದೆದ್ದಿರುವ ಸೆಂಥಿಲ್, ಮಾನನಷ್ಟ ಮೊಕದ್ದಮೆ ಹಾಕುವುದಾಗಿ ತಿಳಿಸಿದ್ದಾರೆ.
ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸಸಿಕಾಂತ್ ಸೆಂಥಿಲ್, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ಅನಗತ್ಯ ಆರೋಪಗಳನ್ನು ಜನಾರ್ಧನ ರೆಡ್ಡಿ ಮಾಡಿದ್ದರು. ಏನೋ ಚೈಲ್ಡಿಶ್ ಹೇಳಿಕೆ ಎಂದು ಇಷ್ಟುದಿನ ಸುಮ್ಮನಿದ್ದೆ. ಆದರೆ ಈಗ ದಿನಕ್ಕೊಂದು ಸುದ್ದಿಯಾಗುತ್ತಿದೆ. ಬೆಳವಣಿಗೆಗಳು ನಡೆಯುತ್ತಿವೆ. ನನ್ನ ವಿರುದ್ಧ ಆರೋಪ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದರು.
ನಾನು ಕರ್ನಾಟಕದಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ನನ್ನ ವಿರುದ್ಧ ಆರೋಪ ಮಾಡುತ್ತಿರುವವರು ಯಾರು? ರಾಜ್ಯದ ಸಂಪತ್ತನ್ನು ಲೂಟಿ ಮಾಡಿ 7 ವರ್ಷ ಜೈಲುವಾಸ ಅನುಭವಿಸಿದವರು. ದೇಶದಮಟ್ಟದಲ್ಲಿ ರಾಜ್ಯದ ಮರ್ಯಾದೆ ಹಾಳುಮಾಡಿದವರು ಇಂದು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ನನಗೆ ದೆಹಲಿಯಲ್ಲಿ ಮನೆಯನ್ನೇ ಕೊಟ್ಟಿಲ್ಲ. ಹೀಗಿರುವಾಗ ದೆಹಲಿಗೆ ಬುರುಡೆ ತೆಗೆದುಕೊಂಡು ಬಂದು ನನ್ನ ಮನೆಗೆ ಬಂದರಂತೆ ಇದು ಹೇಗೆ ಸಾಧ್ಯ? ನನಗೆ ತಲೆಬುರುಡೆ ಎಲ್ಲಿ ಸಿಗುತ್ತೆ ಅಂತಾನೇ ಗೊತ್ತಿಲ್ಲ. ಅದು ಗಂಗಾವತಿ ಶಾಸಕ ಜನಾರ್ಧನ ರೆಡ್ಡಿಯವರಿಗೇ ಗೊತ್ತಿರಬಹುದು ಎಂದು ವಾಗ್ದಾಳಿ ನಡೆಸಿದರು.