ಮಲಪ್ಪುರಂನ ಪೂವಂಚೇರಿ ತೆಕ್ಕೆವೀಟ್ಟಿಲ್‌ನ ಶಂಕರನಾರಾಯಣ (75) ಅವರು ನಿಧನರಾಗಿದ್ದಾರೆ. ತಮ್ಮ ಮಗಳು ಕೃಷ್ಣಪ್ರಿಯಳ ಅತ್ಯಾಚಾರಿ ಮತ್ತು ಕೊಲೆಗಡುಕ ಮುಹಮ್ಮದ್ ಕೋಯಾನನ್ನು ಗುಂಡಿಕ್ಕಿ ಕೊಂದ ಪ್ರಕರಣದಿಂದ ಅವರು ಚಿರಪರಿಚಿತರಾಗಿದ್ದರು.
ಕೃಷ್ಣಪ್ರಿಯ ಏಳನೇ ತರಗತಿಯಲ್ಲಿ ಓದುತ್ತಿದ್ದಾಗ ಅವರ ನೆರೆಹೊರೆಯವನಾದ ಎಲಂಕೂರ್ ಚರಂಗಾವು ಕುನ್ನುಮ್ಮಲ್‌ನ ಮುಹಮ್ಮದ್ ಕೋಯಾ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದನು. ಆ ಘಟನೆ ನಡೆದದ್ದು 2001ರ ಫೆಬ್ರವರಿ 9ರಂದು. ಕೃಷ್ಣಪ್ರಿಯ ಆಗ 13 ವರ್ಷದ ಬಾಲಕಿ. ಶಾಲೆ ಮುಗಿಸಿ ಮನೆಗೆ ಬರುತ್ತಿದ್ದಾಗ ಆಕೆಯ ಮೇಲೆ ಭೀಕರ ಅತ್ಯಾಚಾರ ನಡೆದಿತ್ತು. ಒಂದು ವರ್ಷದ ನಂತರ ಕೋಯಾ ಜಾಮೀನಿನ ಮೇಲೆ ಬಿಡುಗಡೆಯಾದಾಗ ಶಂಕರನಾರಾಯಣ ಆತನಿಗೆ ಗುಂಡಿಕ್ಕಿ ಕೊಂದಿದ್ದರು. ಕೃತ್ಯ ಎಸಗಿದ ನಂತರ ಶಂಕರನಾರಾಯಣ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ತಪ್ಪೊಪ್ಪಿಕೊಂಡಿದ್ದರು. ಆಗ ಕೋಯಾನಿಗೆ 24 ವರ್ಷ ವಯಸ್ಸಾಗಿತ್ತು. ಕೃಷ್ಣಪ್ರಿಯ ಬದುಕಿದ್ದಿದ್ದರೆ ಈಗ ಆಕೆಗೆ 37 ವರ್ಷ ವಯಸ್ಸಾಗಿರುತ್ತಿತ್ತು.
ಮಂಜೇರಿ ಸೆಷನ್ಸ್ ನ್ಯಾಯಾಲಯವು ಶಂಕರನಾರಾಯಣ ಮತ್ತು ಇತರ ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು, ಆದರೆ ಸಾಕ್ಷ್ಯಗಳ ಕೊರತೆಯಿಂದಾಗಿ ಹೈಕೋರ್ಟ್ ಅವರನ್ನು ಖುಲಾಸೆಗೊಳಿಸಿತು. ಪೊಲೀಸರು ಮೃತದೇಹವನ್ನು ಮರುಪಡೆಯುವಲ್ಲಿ ಮತ್ತು ಅಪರಾಧ ಹಿನ್ನೆಲೆಯುಳ್ಳ ಆರೋಪಿಗೆ ಇತರ ಶತ್ರುಗಳಿರಬಹುದು ಎಂಬ ಅಂಶದಲ್ಲಿ ವಿಫಲರಾಗಿದ್ದಾರೆ ಎಂದು ಹೇಳಿ ನ್ಯಾಯಾಲಯವು ಶಂಕರನಾರಾಯಣರನ್ನು ಬಿಡುಗಡೆ ಮಾಡಿತ್ತು.
ಶಂಕರನಾರಾಯಣ ದನಗಳನ್ನು ಸಾಕುವ ಮೂಲಕ ತಮ್ಮ ಕುಟುಂಬವನ್ನು ನಿರ್ವಹಿಸುತ್ತಿದ್ದರು. ಕೃಷ್ಣಪ್ರಿಯ ಮೃತಪಟ್ಟ ನಂತರ, ಶಂಕರನಾರಾಯಣ ತಮ್ಮ ಜೀವನದುದ್ದಕ್ಕೂ ಕಣ್ಣೀರಿನಲ್ಲೇ ಇದ್ದರು. ಅವರ ನೆರೆಹೊರೆಯವರು ಹೇಳುವ ಪ್ರಕಾರ, ಅವರು ಸಾಯುವವರೆಗೂ ಕೃಷ್ಣಪ್ರಿಯಳ ಬಗ್ಗೆ ಮಾತನಾಡುತ್ತಿದ್ದರು. ಶಂಕರನಾರಾಯಣರಿಗೆ ಪತ್ನಿ ಶಾಂತಕುಮಾರಿ ಮತ್ತು ಪುತ್ರರಾದ ಪ್ರಸಾದ್ ಮತ್ತು ಪ್ರಕಾಶ್ ಇದ್ದಾರೆ.