ಬೆಂಗಳೂರು: ಬೇಸಿಗೆ ಆರಂಭವಾಯಿತೆಂದರೆ ರಾಜ್ಯ ರಾಜಧಾನಿ ಬೆಂಗಳೂರಿನ ಹಲವೆಡೆಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗುತ್ತದೆ. ಇಂತಹ ಸಮಸ್ಯೆಯನ್ನು ತಪ್ಪಿಸಲು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚನೆ ಮೇರೆಗೆ ಜಲಮಂಡಳಿ ಮನೆ ಬಾಗಿಲಿಗೆ ಕುಡಿಯುವ ನೀರು ಪೂರೈಕೆಗೆ ಮುಂದಾಗಿದೆ.
‘ಸಂಚಾರಿ ಕಾವೇರಿ’ ಎಂಬ ವಿನೂತನ ಯೋಜನೆ ಮೂಲಕ ಬೆಂಗಳೂರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಆನ್ ಲೈನ್ ಮೂಲಕ ಬುಕ್ ಮಾಡಿದರೆ ಸಾಕು. ನಿಮ್ಮ ಮನೆ ಬಾಗಿಲಿಗೆ ಬರಲಿದೆ ಶುದ್ಧ ಕುಡಿಯುವ ನೀರು.
ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಫೇಸ್ ಬುಕ್ ನಲ್ಲಿ ಮಾಹಿತಿ ನೀಡಿದ್ದಾರೆ. ಬೇಸಿಗೆ ಸಮಯದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ, ಗಗನಕ್ಕೇರುವ ಟ್ಯಾಂಕರ್ ದರಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ, ನನ್ನ ಸೂಚನೆಯ ಮೇರೆಗೆ, BWSSB ವತಿಯಿಂದ ‘ಸಂಚಾರಿ ಕಾವೇರಿ’ ಎಂಬ ವಿನೂತನವಾದ ಯೋಜನೆಯನ್ನು ಪರಿಚಯಿಸುತ್ತಿದ್ದೇವೆ. ಈ ಯೋಜನೆ ದೇಶದಲ್ಲೇ ಮೊದಲು! ಖಾಸಗಿ ಟ್ಯಾಂಕರ್‌ಗಳ ದರ ಏರಿಕೆಯ ಸಮಸ್ಯೆಗೆ ಪರಿಹಾರವಾಗಿ, ಬೆಂಗಳೂರಿನ ಜನತೆಗೆ ನಿಗದಿತ ದರದಲ್ಲಿ ಶುದ್ಧ ನೀರು ದೊರಕುವ ವ್ಯವಸ್ಥೆ ಇದಾಗಿದೆ ಎಂದು ತಿಳಿಸಿದ್ದಾರೆ.
ಆನ್‌ಲೈನ್ ಬುಕ್ಕಿಂಗ್ ಮಾಡಿದರೆ, ಬಿಐಎಸ್ ಪ್ರಮಾಣೀಕೃತ ಶುದ್ಧ ಕುಡಿಯುವ ನೀರು ಇನ್ನು ಮುಂದೆ ಬೆಂಗಳೂರು ಜಲಮಂಡಳಿಯ ಟ್ಯಾಂಕರ್‌ಗಳ ಮೂಲಕವೇ ಮನೆ ಬಾಗಿಲಿಗೆ ಸರಬರಾಜು ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರನ್ನು ‘ಟ್ಯಾಂಕರ್ ಸಿಟಿ’ ಎಂದು ಕರೆದವರಿಗೆ ಈ ಮೂಲಕ ತಕ್ಕ ಉತ್ತರವನ್ನು ನೀಡಲಿದ್ದೇವೆ! ಎಂದು ವಿಪಕ್ಷಗಳಿಗೆ ಟಾಂಗ್ ನೀಡಿದ್ದಾರೆ.