ಕಾರವಾರ: ಕಳ್ಳರು, ಖದೀಮರಿಗೆ ದೇವರ ಬಗ್ಗೆಯೂ ಕಿಂಚಿತ್ತು ಭಯ-ಭಕ್ತಿ ಎಂಬುದು ಇಲ್ಲ. ಕಳ್ಳತನವನ್ನೇ ಕಾಯಕವನ್ನಾಗಿ ಮಾಡಿಕೊಂಡಿರುವ ಖದೀಮರಿಗೆ ಮನೆಯಾದರೇನು? ಮಂದಿರವಾದರೇನು? ಕದಿಯುವುದೇ ಕೆಲಸವಾಗಿದೆ. ಸಾಯಿ ಮಂದಿರದ ಬೀಗ ಮುರಿದು ಒಳನುಗ್ಗಿರುವ ಕಳ್ಳರು 15 ಕೆಜಿಗೂ ಅಧಿಕ ಬೆಳ್ಳಿ ವಸ್ತುಗಖನ್ನು ಕದ್ದು ಪರಾರಿಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೋಡಿಬಾಗ್ ನ ಸಾಯಿಕಟ್ಟದಲ್ಲಿ ನಡೆದಿದೆ.
ಮಂದಿರದಲ್ಲಿರುವ ಸಾಯಿಬಾಬಾ ಬೆಳ್ಳಿ ಪಾದುಕೆ, ಕಿರೀಟ, ಛತ್ರಿ, ಇನ್ನಿತರ ಬೆಳ್ಳಿ ವಸ್ತುಗಳನ್ನು ಕಳ್ಳರು ದೋಚಿದ್ದಾರೆ. ಒಟ್ಟು 15 ಕೆಜಿಗೂ ಅಧಿಕ ಬೆಳ್ಳಿ ವಸ್ತುಗಳು ಕಳ್ಳತನವಾಗಿದೆ. ಇಂದು ಬೆಳಿಗ್ಗೆ ಮಂದಿರಕ್ಕೆ ಭಕ್ತರು ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಸ್ಥಳಕ್ಕಾಗಮಿಸಿದ ಕಾರವಾರ ನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಕಳ್ಳರ ಬಂಧನಕ್ಕೆ ಜಾಲ ಬೀಸಿದ್ದಾರೆ.