ನಟಿ ಸಮಂತಾ ರುತ್ ಪ್ರಭು ಅವರು ಇತ್ತೀಚೆಗೆ ತಮ್ಮ ವೃತ್ತಿ ಜೀವನದ ಅಚ್ಚರಿಯ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಕಳೆದ ವರ್ಷವೊಂದರಲ್ಲೇ ತಮ್ಮ ಮೌಲ್ಯಗಳಿಗೆ ಹೊಂದಿಕೆಯಾಗದ ಕಾರಣ ಬರೋಬ್ಬರಿ 15 ಬ್ರ್ಯಾಂಡ್ ಡೀಲ್‌ಗಳನ್ನು ನಿರಾಕರಿಸಿದ್ದು, ಕೋಟ್ಯಂತರ ರೂಪಾಯಿಗಳನ್ನು ಕಳೆದುಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಫೂಡ್‌ಫಾರ್ಮರ್‌ಗೆ ನೀಡಿದ ಸಂದರ್ಶನದಲ್ಲಿ ಸಮಂತಾ ತಮ್ಮ ಯೌವನದಲ್ಲಿ ಮನರಂಜನಾ ಉದ್ಯಮದಲ್ಲಿನ ಯಶಸ್ಸನ್ನು ತಾವು ಹೊಂದಿದ್ದ ಯೋಜನೆಗಳು ಮತ್ತು ಬ್ರ್ಯಾಂಡ್ ಅನುಮೋದನೆಗಳ ಸಂಖ್ಯೆಯಿಂದ ಅಳೆಯಲಾಗುತ್ತಿತ್ತು ಎಂದು ನೆನಪಿಸಿಕೊಂಡರು. ದೊಡ್ಡ ಬಹುರಾಷ್ಟ್ರೀಯ ಬ್ರ್ಯಾಂಡ್‌ಗಳ ರಾಯಭಾರಿಯಾಗಿದ್ದಾಗ ಸಂತೋಷವಾಗಿದ್ದರೂ, ಕಾಲಾನಂತರದಲ್ಲಿ ತಮ್ಮ ಆಯ್ಕೆಗಳ ಬಗ್ಗೆ ಮರುಪರಿಶೀಲನೆ ನಡೆಸುವ ಅನಿವಾರ್ಯತೆ ಎದುರಾಯಿತು ಎಂದು ಅವರು ತಿಳಿಸಿದರು.
ಸಮಂತಾ ರುತ್ ಪ್ರಭು “ಆದರೆ ಇಂದು, ನಾನು ಎಷ್ಟು ತಪ್ಪು ಎಂದು ಅರಿತುಕೊಂಡಿದ್ದೇನೆ. ನನ್ನ ಆಯ್ಕೆಗಳ ಬಗ್ಗೆ ಮರುಪರಿಶೀಲನೆ ನಡೆಸಲು ನಾನು ಬಲವಂತವಾಗಿ ಒಳಗಾದೆ ಮತ್ತು ನನಗೆ ಸರಿ ಎನಿಸಿದ್ದನ್ನು ಅನುಸರಿಸಬೇಕೆಂದು ನನಗೆ ತಿಳಿದಿತ್ತು. ಇಂದು, ನನ್ನ ಎಲ್ಲಾ ಮೂರ್ಖತನಗಳಿಗೆ ಕ್ಷಮೆಯಾಚಿಸಬೇಕು ಎಂದು ಭಾವಿಸುತ್ತೇನೆ” ಎಂದರು.
ಮುಂದುವರೆದು, “ಆ ಅನುಮೋದನೆಗಳನ್ನು ಬಹಳ ಹಿಂದೆಯೇ ಮಾಡಲಾಗಿತ್ತು. ಕಳೆದ ವರ್ಷವೊಂದರಲ್ಲೇ ಸುಮಾರು 15 ಬ್ರ್ಯಾಂಡ್‌ಗಳಿಗೆ ನಾನು ನೋ ಎಂದಿದ್ದೇನೆ ಮತ್ತು ಕೋಟ್ಯಂತರ ರೂಪಾಯಿಗಳನ್ನು ಕಳೆದುಕೊಂಡಿದ್ದೇನೆ. ಈಗ ಪ್ರತಿ ಬಾರಿ ಅನುಮೋದನೆ ಬಂದಾಗಲೂ, ನಾನು ಒಪ್ಪಿಕೊಳ್ಳುವ ಮೊದಲು 3 ವೈದ್ಯರಿಂದ ನನ್ನ ಬ್ರ್ಯಾಂಡ್‌ಗಳನ್ನು ಪರಿಶೀಲಿಸುತ್ತೇನೆ” ಎಂದು ತಮ್ಮ ಈಗಿನ ಕಟ್ಟುನಿಟ್ಟಿನ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಸಮಂತಾ ರುತ್ ಪ್ರಭು ಅವರಿಗೆ 2022 ರಲ್ಲಿ ಮಯೋಸಿಟಿಸ್ ಎಂಬ ಸ್ವಯಂ ನಿರೋಧಕ ಕಾಯಿಲೆ ಇರುವುದು ಪತ್ತೆಯಾಗಿತ್ತು. ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿರುವ ಅವರು, ತಾವು ಅನುಮೋದಿಸುವ ಉತ್ಪನ್ನಗಳು ತಮ್ಮ ಮೌಲ್ಯಗಳಿಗೆ ಅನುಗುಣವಾಗಿರಬೇಕು ಮತ್ತು ಆರೋಗ್ಯಕ್ಕೆ ಯಾವುದೇ ರೀತಿಯ ಹಾನಿ ಉಂಟುಮಾಡಬಾರದು ಎಂದು ಖಚಿತಪಡಿಸಿಕೊಳ್ಳಲು ಬಯಸುತ್ತಾರೆ. ಹಣಕ್ಕಿಂತ ತಮ್ಮ ಮೌಲ್ಯಗಳು ಮತ್ತು ಆರೋಗ್ಯವೇ ಮುಖ್ಯ ಎಂದು ಸಮಂತಾ ತಮ್ಮ ಈ ದಿಟ್ಟ ನಿರ್ಧಾರದ ಮೂಲಕ ಸಾರಿ ಹೇಳಿದ್ದಾರೆ.