ಬೆಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್. ನಾರಾಯಣ್ ಹೆಸರಿನಲ್ಲಿ ನಕಲಿ ಖಾತೆ ತೆರೆದು ಕಿಡಿಗೇಡಿಗಳು ಸ್ಟಾರ್ ನಟರಿಗೆ ಅವಹೇಳನ ಮಾಡಿದ್ದಾರೆ. ಈ ಸಂಬಂಧ ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದಾರೆ.
ನಿರ್ದೇಶಕ ಎಸ್. ನಾರಾಯಣ್ ಹೆಸರಿನಲ್ಲಿ ನಕಲಿ ಖಾತೆ ತೆರೆದ ಕಿಡಿಗೇಡಿಗಳು ಕೆಲವು ಸ್ಟಾರ್ ನಟರ ಬಗ್ಗೆ ಅವಹೇಳನವಾಗಿ ಪೋಸ್ಟ್ ಮಾಡಿದ್ದಾರೆ. ಈ ಸಂಬಂಧ ಎಸ್. ನಾರಾಯಣ್ ಅವರು ಇಂದು ನಗರ ಪೊಲೀಸ್ ಕಮಿಷನರ್ ಕಚೇರಿಗೆ ಆಗಮಿಸಿ ಕಮಿಷನರ್ ಸೀಮಂತ್ ಕುಮಾರ್ ಅವರಿಗೆ ದೂರು ನೀಡಿದ್ದಾರೆ.
ಕಮಿಷನರ್ ಗೆ ದೂರು ನೀಡಿದ ಬಳಿಕ ಮಾತನಾಡಿದ ಎಸ್.ನಾರಾಯಣ್, ನನ್ನ ಹೆಸರಿನಲ್ಲಿ ನಕಲಿ ಅಕೌಂಟ್ ತೆರೆದು ಕೆಟ್ಟದಾಗಿ ಪೋಸ್ಟ್ ಮಾಡಿದ್ದಾರೆ. ಅಪ್ಪು, ಶಿವಣ್ಣ, ಸುದೀಪ್ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದಾರೆ. ಹೀಗೆ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿರಲಿಲ್ಲ. ನನಗೆ ನನ್ನ ಸ್ನೇಹಿತರು ಗಮನಕ್ಕೆ ತಂದಿದ್ದಾರೆ. ಸುಮಾರು 5-6 ತಿಂಗಳಿಂದ ಈ ರೀತಿ ಮಾಡಿದ್ದಾರೆ. 4-5 ದಿನಗಳ ಹಿಂದೆ ನನ್ನ ಗಮನಕ್ಕೆ ಬಂದಿದೆ. ಹೀಗಾಗಿ ಪೋಸ್ಟ್ ಮಾಡಿದವರ ವಿರುದ್ಧ ದೂರು ನೀಡಿದ್ದೇನೆ ಎಂದು ತಿಳಿಸಿದರು.
ಸೋಷಿಯಲ್ ಮೀಡಿಯಾದಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಕರ್ನಾಟಕದಲ್ಲಿ ಇಂತಹ ಪ್ರಕರಣ ಹೆಚ್ಚುತ್ತಿದೆ. ಇದು ಕನ್ನಡಿಗರಿಗೆ ಅವಮಾನವಾಗಿದೆ. ಯಾರೇ ಆಗಲಿ ಒಂದು ಚೌಕಟ್ಟು ದಾಟಬಾರದು. ಯಾರ ತೇಜೋವಧೆಯನ್ನೂ ಮಾಡಬಾರದು ಎಂದರು.
ಹಿಂದೆಯೂ ಫ್ಯಾನ್ಸ್ ವಾರ್ ಇತ್ತು. ಆದರೆ ಯಾವುದೂ ಮಿತಿಮಿರಿ ಹೋಗುತ್ತಿರಲಿಲ್ಲ. ಈ ರೀತಿ ಚಿತ್ರರಂಗ ಬೇರೆ ಕಡೆ ಹೋಗುತ್ತಿರುವುದು ಸರಿಯಲ್ಲ. ಇದು ಅಸಹ್ಯಕಾರಿ ಬೆಳವಣಿಗೆ. ನಾವೂ ತಲೆತಗ್ಗಿಸುವಂತೆ ಆಗುತ್ತಿದೆ. ಪ್ರತಿಯೊಬ್ಬರೂ ಕೂಡ ನಾಗರಿಕರು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನಾವು ಮಾನವರು. ಹೇಗೆ ಮಾತನಡಬೇಕು ಎಂಬುದನ್ನು ತಿಳಿದುಕೊಂಡಿರಬೇಕು. ವಾಣಿಜ್ಯ ಮಂಡಳಿ ಈ ಬಗ್ಗೆ ಏನು ಮಾತನಾಡುತ್ತೆ ನೋಡುತ್ತೇನೆ. ಉದ್ಯಮ ಇಂತಹ ಸಂದರ್ಭದಲ್ಲಿ ಮಾರ್ಗದರ್ಶನ ಮಾಡುವ ಕೆಲಸ ಮಾಡಬೇಕು ಎಂದರು.