ರಷ್ಯಾ & ಉಕ್ರೇನ್ ಯುದ್ಧಕ್ಕೆ ಬ್ರೇಕ್ ಹಾಕಲು ಎಲ್ಲಾ ರೀತಿಯ ಪ್ರಯತ್ನ ಮಾಡಿ ಸೋತು ಹೋಗುತ್ತಿದೆ ಇಡೀ ಜಗತ್ತು. ಯಾಕಂದ್ರೆ ಈ ಯುದ್ಧ ಈಗಾಗಲೇ 4 ವರ್ಷ ಮುಗಿಸಿ 5ನೇ ವರ್ಷವನ್ನೂ ಕಂಪ್ಲೀಟ್ ಮಾಡುವ ಕಡೆಗೆ ನುಗ್ಗುತ್ತಿದೆ. ಈ ಯುದ್ಧ ಭವಿಷ್ಯದಲ್ಲಿ ದೊಡ್ಡ ವಿನಾಶ ಸೃಷ್ಟಿ ಮಾಡುವ ಆತಂಕ ಇದೀಗ ಆವರಿಸಿದೆ, ಯಾಕಂದ್ರೆ ರಷ್ಯಾ & ಉಕ್ರೇನ್ ಬಡಿದಾಟ ನಿಲ್ಲಿಸದೆ ನಿರಂತರವಾಗಿ ಕಿರಿಕ್ ಮಾಡಿಕೊಳ್ಳುತ್ತಿವೆ. ಇನ್ನೇನು ಈ ಭಯಾನಕ ಯುದ್ಧಕ್ಕೆ ಬ್ರೇಕ್ ಬಿದ್ದೇ ಬಿಡುತ್ತದೆ ಅನ್ನುವಾಗಲೇ ಮತ್ತೆ ಮತ್ತೆ ದಾಳಿಗಳು ಮತ್ತೆ ಪ್ರತಿದಾಳಿಯೂ ಶುರುವಾಗುತ್ತಿವೆ. ಇದೇ ರೀತಿ ದಿಢೀರ್ ರಷ್ಯಾ ಸೇನೆ ಇದೀಗ ಬರೋಬ್ಬರಿ 656 ಡ್ರೋನ್ & 73 ಮಿಸೈಲ್ ಹಾರಿಸಿ ಉಕ್ರೇನ್ ದೇಶದ ನಿದ್ದೆ ಹಾರಿ ಹೋಗುವಂತೆ ಮಾಡಿದೆ. ಈ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ…
ಹೌದು, ರಷ್ಯಾ ಮಂಗಳವಾರ ಉಕ್ರೇನ್ ಮೇಲೆ ಭಾರೀ ಪ್ರಮಾಣದಲ್ಲಿ ಡ್ರೋನ್ & ಕ್ಷಿಪಣಿ ದಾಳಿ ನಡೆಸಿದೆ. ಇನ್ನು ಈ ಭಯಾನಕ ದಾಳಿ ಪರಿಣಾಮ ಕನಿಷ್ಠ 18 ಉಕ್ರೇನ್ ನಾಗರಿಕರು ಮೃತಪಟ್ಟಿದ್ದಾರೆ & 100ಕ್ಕೂ ಹೆಚ್ಚು ಪ್ರಜೆಗಳು ಗಾಯಗೊಂಡಿದ್ದಾರೆ ಎಂದು ಆರೋಪಿಸಿದೆ ಉಕ್ರೇನ್ ಸರ್ಕಾರ. ಮಾಸ್ಕೋ ಇತ್ತೀಚೆಗಷ್ಟೇ ಉಕ್ರೇನ್ ರಾಜಧಾನಿ ಕೀವ್ ವಿರುದ್ಧ ಮತ್ತಷ್ಟು ದಾಳಿ ನಡೆಸುವುದಾಗಿ ಎಚ್ಚರಿಕೆಯನ್ನ ನೀಡಿದ ಕೆಲವೇ ದಿನಗಳ ನಂತರ ಇಂತಹ ಡೆಡ್ಲಿ ಅಟ್ಯಾಕ್ ಆಗಿದ್ದು, ಯುದ್ಧ ಇನ್ನಷ್ಟು ತೀವ್ರಗೊಳ್ಳುವ ಮುನ್ಸೂಚನೆಯೂ ಈ ಮೂಲಕ ಇದೀಗ ಸಿಕ್ಕಂತಾಗಿದೆ.

ಉಕ್ರೇನ್ ಸೇನಾ ಪ್ರದೇಶಗಳೇ ಟಾರ್ಗೆಟ್
ರಷ್ಯಾ ಸೇನೆ ಈಗಾಗಲೇ ಎಚ್ಚರಿಕೆಯ ನೀಡಿರುವಂತೆ, ಉಕ್ರೇನ್‌ನ ಪ್ರಮುಖ ನಿರ್ಧಾರ ಕೈಗೊಳ್ಳುವ ಕೇಂದ್ರಗಳು ಹಾಗೂ ಸೇನಾ ಕಮಾಂಡ್ ಕಚೇರಿ ನಾಶ ಮಾಡುವುದಾಗಿ ಶಪಥ ಮಾಡಿದೆ. ಇದಕ್ಕೂ ಮುನ್ನ ನಡೆದ ಭಯಾನಕ ದಾಳಿಯಲ್ಲಿ 21 ಜನ ಮೃತಪಟ್ಟಿದ್ದಾರೆ ಎಂದು ರಷ್ಯಾ ತಿಳಿಸಿತ್ತು. ಇತ್ತೀಚಿನ ದಾಳಿಗಳನ್ನ ನೋಡುತ್ತಿದ್ದರೆ ಈ ಡೆಡ್ಲಿ ಯುದ್ಧದಲ್ಲಿ ಎರಡೂ ದೇಶಗಳು ಪರಸ್ಪರ ಪ್ರತೀಕಾರಾತ್ಮಕ ಕ್ರಮ ಹೆಚ್ಚಿಸುತ್ತಿರುವುದು ಸ್ಪಷ್ಟವೇ ಆಗಿದೆ. ಸಂಘರ್ಷ ಮತ್ತಷ್ಟು ಉಲ್ಬಣಗೊಳಿಸುತ್ತಿರುವ ಕಾರಣಕ್ಕೆ ಯುರೋಪ್ ಭಾಗದಲ್ಲಿ ಆತಂಕ ಇನ್ನಷ್ಟು ಹೆಚ್ಚಾಗಿದೆ. ಹಾಗೇ ಭೀಕರ ಯುದ್ಧದ ಭೀತಿಯಲ್ಲಿ ಉಕ್ರೇನ್ ದೇಶದ ಜನರು ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುವ ವಾತಾವರಣ ನಿರ್ಮಾಣ ಆಗಿದೆ.
ರಷ್ಯಾ ಈ ದಾಳಿಗೆ ಹೈಪರ್‌ಸೋನಿಕ್ ಮಿಸೈಲ್‌ಗಳ ರಾಶಿಯನ್ನೇ ಬಳಸಿದ್ದು, ಉಕ್ರೇನ್ ದೇಶದ ಪ್ರಮುಖ ಪ್ರದೇಶ ಖಾರ್ಕಿವ್ & ಡ್ನಿಪ್ರೊಪೆಟ್ರೋವ್ಸ್ಕ್ ಈ ದಾಳಿಯಲ್ಲಿ ನಲುಗಿ ಹೋಗಿವೆ. ಇದೇ ಮೇ 25ರಂದು ರಷ್ಯಾ ವಿದೇಶಾಂಗ ಸಚಿವಾಲಯವು ನೀಡಿದ್ದ ಎಚ್ಚರಿಕೆಯ ಬಳಿಕ ದಾಳಿ ನಡೆದಿದೆ. ಅಲ್ಲದೆ ಉಕ್ರೇನ್ ಮೇಲೆ ದಾಳಿ ಮಾಡುವುದಕ್ಕೂ ಮುನ್ನ ರಷ್ಯಾ, ವಿದೇಶಿ ನಾಗರಿಕರು ಸೇರಿದಂತೆ ರಾಜತಾಂತ್ರಿಕರು ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳ ಸಿಬ್ಬಂದಿ ಆದಷ್ಟು ಬೇಗನೇ ಕೀವ್ ತೊರೆಯಿರಿ ಎಂದು ತಿಳಿಸಿತ್ತು. ಇನ್ನು ಈ ದಾಳಿಯ ನಂತರ ರಷ್ಯಾ & ಉಕ್ರೇನ್ ಯುದ್ಧ ಮತ್ತಷ್ಟು ಜಟಿಲವಾಗಿದ್ದು, ಶಾಂತಿ ಮಾತುಕತೆ ಮತ್ತಷ್ಟು ಕಗ್ಗಂಟಾಗಿ ಪರಿಣಮಿಸಿದೆ.
600ಕ್ಕೂ ಹೆಚ್ಚು ಡ್ರೋನ್ ಬಳಕೆ
ರಷ್ಯಾ ದಾಳಿಗೆ ಪ್ರತಿಕ್ರಿಯೆ ನೀಡಿರುವ ಉಕ್ರೇನ್ ಸರ್ಕಾರ, ರಷ್ಯಾ ಸೇನೆ ಸುಮಾರು 600ಕ್ಕೂ ಹೆಚ್ಚು ಡ್ರೋನ್‌ಗಳು & ಡಜನ್‌ಗಟ್ಟಲೆ ಕ್ಷಿಪಣಿಗಳನ್ನ ಉಡಾಯಿಸಿದೆ ಎಂದು ಆರೋಪಿಸಿದೆ. ಇವುಗಳಲ್ಲಿ ತಡೆಯಲು ಅತ್ಯಂತ ಕಷ್ಟಕರವಾದ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಕೂಡ ಸೇರಿವೆ ಎಂದು ಉಕ್ರೇನ್ ಈಗ ಆಕ್ರೋಶ ಹೊರ ಹಾಕಿದೆ. ಉಕ್ರೇನ್ ವಾಯುಪಡೆ ನೀಡಿದ ಮಾಹಿತಿ ಪ್ರಕಾರ ದಾಳಿ ವೇಳೆ ಒಟ್ಟು 656 ಡ್ರೋನ್‌ಗಳು & 73 ಕ್ಷಿಪಣಿಗಳನ್ನು ಪತ್ತೆ ಹಚ್ಚಲಾಗಿದೆ. ಇದರಲ್ಲಿ 602 ಡ್ರೋನ್‌ಗಳು & 40 ಕ್ಷಿಪಣಿಗಳನ್ನು ವಾಯು ರಕ್ಷಣಾ ವ್ಯವಸ್ಥೆ ಯಶಸ್ವಿಯಾಗಿ ಹೊಡೆದು ಹಾಕಿದೆ ಎಂದು ಸದ್ಯ ಉಕ್ರೇನ್ ತಿಳಿಸಿದೆ.

