ಚಂಡೀಗಢ: ಕಾಂಗ್ರೆಸ್ ಹೈಕಮಾಂಡ್ ಗೆ 500 ಕೋಟಿ ರೂ. ಇರುವ ಸೂಟ್ ಕೇಸ್ ಕೊಡುವವರು ಮುಖ್ಯಮಂತ್ರಿ ಅಭ್ಯರ್ಥಿ ಆಗುತ್ತಾರೆ ಎಂದು ಪಂಜಾಬ್ ಮಾಜಿ ಉಪಮುಖ್ಯಮಂತ್ರಿ ನವಜೋತ್ ಸಿಂಗ್ ಸಿಧು ಅವರ ಪತ್ನಿ ಹಾಗೂ ಮಾಜಿ ಶಾಸಕಿ ನವಜೋತ್ ಕೌರ್ ಹೇಳಿದ್ದಾರೆ.
ಪಂಜಾಬ್ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ ಅವರನ್ನು ಭೇಟಿಯಾದ ನವಜೋತ್ ನಂತ ಮಾತನಾಡಿದರು. ಪಂಜಾಬ್ ಕಾಂಗ್ರೆಸ್ ನಲ್ಲಿ ಒಳ ಜಗಳ ಇದೆ. ಮುಖ್ಯಮಂತ್ರಿ ಸ್ಥಾನಕ್ಕೆ ಐವರು ನಾಯಕರು ಆಕಾಂಕ್ಷಿಗಳಾಗಿದ್ದಾರೆ. ನವಜೋತ್ ಸಿಂಗ್ ಸಿಧು ಮುಂದೆ ಬರಲು ಈ ಐದು ಜನ ಬಿಡುವುದಿಲ್ಲ ಎಂಬುದನ್ನು ಹೈಕಮಾಂಡ್ ಅರ್ಥ ಮಾಡಿಕೊಂಡರೆ ಒಳ್ಳೆಯದು ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳಲು ನೀಡಬೇಕಿರುವ 500 ಕೋಟಿ ರೂಪಾಯಿ ನಮ್ಮ ಬಳಿ ಇಲ್ಲ. ನನ್ನ ಪತಿ ಕಾಂಗ್ರೆಸ್ ಗೆ ನಿಷ್ಠರಾಗಿದ್ದಾರೆ. ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದರೆ ಒಳ್ಳೆಯದು. ಇಲ್ಲದಿದ್ದರೆ ಅವರು ಈಗ ಮಾಡುತ್ತಿರುವ ಕೆಲಸದಿಂದಲೇ ಉತ್ತಮ ಹಣ ಗಳಿಸುತ್ತಿದ್ದಾರೆ ಮತ್ತು ಸಂತೋಷವಾಗಿದ್ದಾರೆ. ಸಿಧು ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದರೆ ಮತ್ತೆ ಸಕ್ರಿಯ ರಾಜಕಾರಣ ಪ್ರವೇಶಿಸಲಿದ್ದಾರೆ ಎಂದು ನವಜೋತ್ ಕೌರ್ ಹೇಳಿದ್ದಾರೆ.
ಮುಖ್ಯಮಂತ್ರಿ ಪಟ್ಟಕ್ಕಾಗಿ ಕಾಂಗ್ರೆಸ್ ನಲ್ಲಿ ಹಣಕ್ಕೆ ಬೇಡಿಕೆ ಇಟ್ಟವರು ಯಾರು ಎಂಬ ಪ್ರಶ್ನೆಗೆ ಅವರು ಹಾರಿಕೆಯ ಉತ್ತರ ನೀಡಿದ್ದಾರೆ.
