ಬೆಂಗಳೂರು: ಮಚ್ಚು ಹಿಡಿದು ರಸ್ತೆಯಲ್ಲಿ ಅಟ್ಟಹಾಸ ಮೆರೆದಿದ್ದ ಮೂವರು ಪುಡಿರೌಡಿಗಳನ್ನು ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 28ರಂದು ಆಟೋದಲ್ಲಿ ಬಂದಿದ್ದ ಮೂವರು ರಸ್ತೆಯಲ್ಲಿ ಮಚ್ಚು ಹಿಡಿದು ಅಟ್ಟಹಾಸ ಮೆರೆದಿದ್ದರು. ರಾಮಮೂರ್ತಿನಗರದ ಅಂಬೇಡ್ಕರ್ ನಗರದಲ್ಲಿ ಈ ಘಟನೆ ನಡೆದಿತ್ತು. ಪ್ರಶ್ನೆ ಮಾಡಿದ್ದಕ್ಕೆ ಸ್ಥಳೀಯರೊಂದಿಗೆ ಕಿರಿಕ್ ಮಾಡಿದ್ದ ಮೂವರು ಪುಡಿರೌಡಿಗಳು, ಮಚ್ಚು ತೋರಿಸಿ ಬೆದರಿಕೆಯೊಡ್ಡಿದ್ದರು.
ಸ್ಥಳಕ್ಕೆ ಆಗಮಿಸಿದ ಬೀಟ್ ಪೊಲೀಸರಿಗೂ ಆವಾಜ್ ಹಾಕಿದ್ದರು. ಪುಡಿರೌಡಿಗಳ ಅಟ್ಟಹಾಸದ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಗೋಪಿನಾಥ್ ಎಂಬುವವರು ವಿಡಿಯೋ ಸಮೇತ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಸದ್ಯ ಮೂವರು ಪುಡಿರೌಡಿಗಳನ್ನು ಬಂಧಿಸಿರುವ ರಾಮಮೂರ್ತಿನಗರ ಠಾಣೆ ಪೊಲೀಸರು ಕೋರ್ಟ್ ಗೆ ಹಜರುಪಡಿಸಿ ಪರಪ್ಪನ ಅಗ್ರಹಾರ ಜೈಲಿಗೆ ಅಟ್ಟಿದ್ದಾರೆ.